ನನ್ನ ಮನೆ ಕ್ರಿಕೆಟರ್ಸ್ ತಂಡಕ್ಕೆ ವಿಶ್ವ ಮಾನವ ಕಪ್ 
ಜಿಲ್ಲೆ

ತಾಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ ವಿಶ್ವ ಮಾನವ ಕ್ರಿಕೆಟ್ ಕಪ್‌

ಆಲೂರು: ಕ್ರೀಡೆ ಮನರಂಜನೆಯೊಂದಿಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನೂ ವೃದ್ಧಿಸುತ್ತವೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ಅಭಿಪ್ರಾಯಪಟ್ಟರು.

ಮಹಾಕವಿ ಕುವೆಂಪು ಅವರ ಜನ್ಮ ದಿನಾಚರಣೆ ನಿಮಿತ್ತ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಆಲೂರು ತಾಲೂಕು ಘಟಕ ವತಿಯಿಂದ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ತಾಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ ಆಯೋಜಿಸಿದ್ದ ವಿಶ್ವ ಮಾನವ ಕ್ರಿಕೆಟ್ ಕಪ್‌ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಪ್ರತಿ ಘಳಿಗೆಯನ್ನು ರಸಮಯವನ್ನಾಗಿಸಿಕೊಂಡಾಗ ಮಾತ್ರ ಬದುಕು ಉಲ್ಲಾಸದಾಯಕವಾಗಿ ರೂಪುಗೊಳ್ಳಲು ಸಾಧ್ಯ ಎಂದು ಹೇಳಿದರು.

ಕೇಂದ್ರ ಸಮಿತಿಯ ಕೋಶಾಧ್ಯಕ್ಷ ಎಚ್.ಎಸ್.ಬಸವರಾಜ್ ಮಾತನಾಡಿ, ಏಪ್ರಿಲ್ನಲ್ಲಿ ಮುಂಬೈನಲ್ಲಿ ಅಖಿಲ ಭಾರತ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ತಾಲೂಕು ಸಮಿತಿ ಉಪಾಧ್ಯಕ್ಷ ಟಿ.ಕೆ.ನಾಗರಾಜ್ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ಕೋ-ಆಪರೇಟಿವ್ ಸೊಸೈಟಿಯ ಜಿಲ್ಲಾ ಸದಸ್ಯರಾದ ಕೆ.ಎಂ.ಶ್ರೀನಿವಾಸ್, ಎಂ.ಎನ್.ಪರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಲೂರು ತಾಲೂಕು ಮಾಜಿ ನಿರ್ದೇಶಕ ಬಿ.ಆರ್.ಧರ್ಮ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ನಟರಾಜ್ ನಾಕಲಗೂಡು, ಆಲೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ನವೀನ್ ಭೈರಾಪುರ, ಆಲೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಜೆ.ಪೃಥ್ವಿ, ವಿದ್ಯುತ್ ಗುತ್ತಿಗೆದಾರ ಎಸ್.ವಿ.ಕೃಷ್ಣೇಗೌಡ, ಮಣಿಪುರ ಆಲೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಬಿ.ಅಮೃತೇಶ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಡಿ.ಎಂ.ವರದರಾಜ್ ಇತರರಿದ್ದರು.

ನನ್ನ ಮನೆ ಕ್ರಿಕೆಟರ್ಸ್ ತಂಡಕ್ಕೆ ವಿಶ್ವ ಮಾನವ ಕಪ್: ಟೂರ್ನಿಯಲ್ಲಿ ಪಾಳ್ಯದ ಪಾಂಚಜನ್ಯ ಕ್ರಿಕೆಟರ್ಸ್, ಕೆ.ಹೊಸಕೋಟೆಯ ನನ್ನ ಮನೆ ಕ್ರಿಕೆಟರ್ಸ್, ಕುಂದೂರಿನ ಬಿರುಗಾಳಿ ಕ್ರಿಕೆಟರ್ಸ್, ಕಸಬಅನಿಕೇತನ ಕ್ರಿಕೆಟರ್ಸ್ ತಂಡ ಭಾಗವಹಿಸಿದ್ದವು.

ಪಾಳ್ಯ ಮತ್ತು ಕೆ.ಹೊಸಕೋಟೆ ತಂಡದ ನಡುವೆ ನಡೆದ ಫೈನಲ್ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೆ.ಹೊಸಕೋಟೆ ತಂಡ ನಿಗದಿತ 8 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 104 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಪಾಂಚಜನ್ಯ ಕ್ರಿಕೆಟರ್ಸ್ ತಂಡ ನಿಗದಿತ 8 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 100 ರನ್‌ಗಳಿಸಿ 3 ರನ್‌ಗಳಿಂದ ಪರಾಭವಗೊಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.

ರತನ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಒಟ್ಟಾರೆ ಟೂರ್ನಿಯ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ನನ್ನ ಮನೆ ಕ್ರಿಕೇಟರ್ಸ್ ತಂಡದ ಕಿರಣ್‌ಕುಮಾರ್ ಪಡೆದರೆ, ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಪಾಂಚಜನ್ಯ ಕ್ರಿಕೆಟರ್ಸ್ ತಂಡದ ರಘು ಪಡೆದರು. ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಕೆ.ಹೊಸಕೋಟೆ ನನ್ನ ಮನೆ ಕ್ರಿಕೆಟರ್ಸ್ ಮಂಜು ತಮ್ಮದಾಗಿಸಿಕೊಂಡರು.