ಜಿಲ್ಲೆ

ಚಟುವಟಿಕೆಯುಕ್ತ ಜೀವನ ಉತ್ತಮ ಆರೋಗ್ಯಕ್ಕೆ ಸೋಪಾನ: ಕಾರ್ಮಿಕ ಇಲಾಖೆ ಜಂಟಿ ನಿರ್ದೇಶಕ ಸಂಗಮೇಶ ಉಪಾಸೆ ಅಭಿಮತ

ಪಂಕಜ ಕೆ.ಎಂ.

ಬೆಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ ಕಾವೇರಿ ಆಸ್ಪತ್ರೆ ವತಿಯಿಂದ ಭಾನುವಾರ ಹೃದಯದ ಆರೈಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಈ ಸಂಬಂಧ ಆಸ್ಪತ್ರೆಯು ಎಲೆಕ್ಟ್ರಾನಿಕ್ಸ್‌ಸಿಟಿ ಮೊದಲ ಹಂತದಲ್ಲಿ ಹಮ್ಮಿಕೊಂಡಿದ್ದ ವಾಕಥಾನ್, ಜಾಗೃತಿ ಓಟ ಮತ್ತು ಸೈಕ್ಲಿಂಗ್‌ನಲ್ಲಿ ಐಟಿ ಉದ್ಯೋಗಿಗಳು, ಅವರ ಕುಟುಂಬದ ಸದಸ್ಯರು ಸೇರಿ 3 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾರ್ಮಿಕ ಇಲಾಖೆ ಜಂಟಿ ನಿರ್ದೇಶಕ ಸಂಗಮೇಶ ಉಪಾಸೆ ಮಾತನಾಡಿ, ಐಟಿ ಉದ್ಯೋಗಿಗಳು ತಮ್ಮ ಶಕ್ತಿ ಮೀರಿ ದುಡಿಯುವುದರಿಂದ ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಹಾಗಾಗಿ ಉದ್ಯೋಗಿಗಳು ಕೆಲಸ ಜತೆಗೆ ಆರೋಗ್ಯದ ಕಡೆಗೂ ಗಮನ ಹರಿಸುವ ಅಗತ್ಯವಿದೆ. ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಬಿಡುವಿನ ವೇಳೆಯಲ್ಲಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಉತ್ತಮ ಆಹಾರ, ನಿದ್ರೆ ಹಾಗೂ ಒಳ್ಳೆಯ ಅಭ್ಯಾಸಗಳು ಆರೋಗ್ಯಕರ ಜೀವನಕ್ಕೆ ಸೋಪಾನ ಎಂದರು.

ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವಿಜಯ್ ಭಾಸ್ಕರನ್ ಹಾಗೂ ಸಿಬ್ಬಂದಿ ಇದ್ದರು.