ಜಿಲ್ಲೆ

ವಿಶ್ವ ಹೃದಯ ದಿನ : ನಾರಾಯಣ ಹೃದಯಾಲಯದಿಂದ ಜಾಗೃತಿ ಕಾರ್ಯಕ್ರಮ

ಮೈಸೂರು: ವಿಶ್ವ ಹೃದಯ ದಿನದ ಅಂಗವಾಗಿ ಹೃದಯದ ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಒಂದು ತಿಂಗಳ ಕಾಲ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ಈ ಅಭಿಯಾನಕ್ಕೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು.

ಹೃದಯದ ಆರೋಗ್ಯದ ಕುರಿತು ಜನರಲ್ಲಿ ಅರಿವು ಮೂಡಿಸುವ ‘ಹೃದಯ ಜಾಗೃತಿ ವಾಹನ’ಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಚಾಲನೆ ನೀಡಿ ಮಾತನಾಡಿ, ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವ ಬದಲು ಕಾಯಿಲೆ ಬಾರದಂತೆ ತಡೆಯುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ವೈದ್ಯರು ನೀಡುವ ಸಲಹೆಯಂತೆ ಜೀವನ ಶೈಲಿ ರೂಪಿಸಿಕೊಂಡರೆ ಕಾಯಿಲೆಯಿಂದ ದೂರ ಉಳಿಯಬಹುದು ಎಂದು ಅಭಿಪ್ರಾಯಪಟ್ಟರು.

ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಡಾ.ಎಂ.ಎನ್. ರವಿ, ಹೃದ್ರೋಗ ತಜ್ಞ ಡಾ. ವಿ. ಕೇಶವ ಮೂರ್ತಿ, ಜಿಲ್ಲಾ ಅರ್‌ಸಿಎಚ್ ಅಧಿಕಾರಿ ಡಾ.ಜಯಂತ್, ಹೃದ್ರೋಗ ತಜ್ಞ ಡಾ. ಪಿ. ಶ್ರೀನಿವಾಸ್, ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ಪಿ. ಪವನ್ ಕುಮಾರ್, ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕೆ.ವಿ.ಕಾಮತ್ ಹಾಗೂ ಇತರರು ಇದ್ದರು.