ವಿಜಯವಾಣಿ ಸುದ್ದಿಜಾಲ ತೂಬಗೆರೆ
ಭೂಮಿಯ ಮೇಲೆ ನೀರು ಮುಖ್ಯವಾದ ನೈಸರ್ಗಿಕ ಸಂಪನ್ಮೂಲವಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಬಿ.ಜಿ.ಹನುಮಂತರಾಯ ಹೇಳಿದರು.
ಹೋಬಳಿಯ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾ.ಕೃ.ಸಂ.ಪ.ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯನ ಪ್ರತಿಯೊಂದು ಚಟುವಟಿಕೆಯೂ ನೀರಿನ ಪ್ರಮಾಣ ಹಾಗೂ ಗುಣಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಸುವುದರ ಜತೆಗೆ ದೈನಂದಿನ ಜೀವನದಲ್ಲಿ ನೀರು ಹಾಗೂ ಆಹಾರದ ಮಿತವ್ಯಯ ಮತ್ತು ಸದ್ಬಳಕೆಯ ಬಗ್ಗೆ ತಿಳಿಸಿದರು.
ಗೃಹ ವಿಜ್ಞಾನಿ ಎಸ್.ವಿ.ಮೇಘನಾ ಮಾತನಾಡಿ, ಜನರಲ್ಲಿ ಆಹಾರದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವುದು ವಿಶ್ವ ಆಹಾರ ದಿನಾಚರಣೆಯ ಮುಖ್ಯ ಉದ್ದೇಶ. ಎಲ್ಲರಿಗೂ ಪೌಷ್ಟಿಕಾಂಶಯುಕ್ತ ಆಹಾರದ ಲಭ್ಯತೆ ಪ್ರಮುಖವಾಗಿದ್ದು, ಎಲ್ಲರು ಮನೆಯ ಬಳಿ ಪೌಷ್ಟಿಕ ಕೈತೋಟಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು ಎಂದರು.