ಮಂಡ್ಯ: ಭಾರತೀಯ ಸಂಸ್ಕೃತಿ ಉಳಿಸುವ ಕಲಾವಿದರ ಬಾಳು ಚಿಂತಾಜನಕವಾಗಿದೆ. ಅವರ ಉಳಿವು ಆಗಬೇಕಿದೆ. ಆಗಮಾತ್ರ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್, ಕರ್ನಾಟಕ ಸಂಘ, ಉದ್ದೇಶಿತ ಮಂಡ್ಯ ಕಲಾವಿದರ ಪತ್ತಿನ ಸಹಕಾರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಮತ್ತು ನಾಡೋಜ ಜಿ.ನಾರಾಯಣ ಸಂಸ್ಮರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶ್ರೀರಂಗಪಟ್ಟಣ ದಸರಾದಲ್ಲಿ ನೃತ್ಯ ಮಾಡುವುದಕ್ಕೆ 40 ರಿಂದ 50 ಲಕ್ಷ ರೂ ಕೊಡುವ ಬದಲು ಜಾನಪದ ಕಲಾವಿದರನ್ನು ಬಳಸಿಕೊಳ್ಳುವಂತಾಗಲಿ. ಅವರಿಗೆ ಗೌರವಧನ ನೀಡಿದಂತಾಗುತ್ತದೆ ಎಂದರು.
ಜಾನಪದ ವಿದ್ವಾಂಸ ಹಿ.ಶಿ.ರಾಮಚಂದ್ರೇಗೌಡ ಮಾತನಾಡಿ, ಸಂಸ್ಕೃತಿ ಶಾಶ್ವತವಾಗಿರುತ್ತದೆ. ಸಂಸ್ಕೃತಿ ಎಂದರೆ ಅದು ನಡವಳಿಕೆಯಾಗಿದೆ. ಆಚಾರ ವಿಚಾರಗಳಲ್ಲಿ ಸಂಸ್ಕೃತಿಯು ಇದ್ದುಕೊಂಡು ಪುನಃ ಸೃಷ್ಟಿ ಮಾಡಿಕೊಳ್ಳುತ್ತವೆ. ಜಾನಪದ ಏಕೆ ಹುಟ್ಟಿಕೊಂಡಿತು ಎಂದರೆ ದಿನದ ಜಂಜಾಟದಲ್ಲಿ ಅದರಿಂದ ಹೊರಬರುವುದಕ್ಕೆ ಜಾನಪದ ಹುಟ್ಟಿಕೊಂಡಿತು. ಗ್ರಾಮೀಣ ಭಾಗದ ಜನರು ಜಾನಪದ ಸೃಷ್ಟಿ ಮಾಡಿದರು. ಅವರ ಮನಸು ಶುದ್ಧವಾಗಿರುವುದಕ್ಕೆ ಆ ಭಾಗದಲ್ಲಿ ಹುಟ್ಟಿಕೊಂಡಿತು. ಅದೇರೀತಿಯಾಗಿ ಇಂಗ್ಲೆಂಡ್‌ನಲ್ಲಿ ಜನಪರವಾದ ಹೋರಾಟವೇ ಹುಟ್ಟಿಕೊಂಡು ಕಾರ್ಖಾನೆಗಳ ಸಾಮಾಗ್ರಿಗಳು ಬೇಡ ಜನರ ಸಾಮಾಗ್ರಿಗಳು ಬೇಕೆಂಬುದನ್ನು ಪ್ರತಿಪಾದಿಸಲಾಯಿತು ಎಂದರು.
ಜಾನಪದ ಹಾಡುಗಳನ್ನು ಹಾಡುತ್ತೇವೆ ಅಷ್ಟೆ, ಅದನ್ನು ಸೃಷ್ಟಿ ಮಾಡುವ ಕೆಲಸ ಆಗುತ್ತಿಲ್ಲ. ವೈಚಾರಿಕವಾಗಿ ಜಾನಪದವನ್ನು ಮೇಕ್ ಇನ್ ಇಂಡಿಯಾವರೆಗೂ ತೆಗೆದುಕೊಂಡು ಹೋಗುವ ಮೂಲಕ ಇತರೆ ದೇಶಗಳಿಗೆ ಸೆಡ್ಡು ಹೊಡೆಯಲು ಪ್ರೋತ್ಸಾಹ ನೀಡಬೇಕಿದೆ. ಮೊದಲು ಇಂಗ್ಲೆಂಡ್‌ನಲ್ಲಿ ಜಾನಪದವು 18ನೇ ಶತಮಾನದಲ್ಲಿ ಆರಂಭವಾಯಿತು. ಆ ಕಾಲಘಟ್ಟದಲ್ಲಿ ದೊಡ್ಡ ವಿಜ್ಞಾನ ಸ್ಫೋಟ ಆರಂಭವಾಯಿತು. ಅದೇನೆಂದರೆ ಕೈಗಾರೀಕರಣದಿಂದಾಗಿ ಜನ ಬಳಕೆ ಹೆಚ್ಚಾಯಿತು. ಆ ಮೂಲಕ ಬಳಸುವ ತತ್ವಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿ ಕೇವಲ ದುಡಿಮೆಗಷ್ಟೇ ಜನಶಕ್ತಿ ಎನ್ನುವುದರಿಂದ ಹೊರಬರಲು ಚಿಂತಕರು ಒಗ್ಗೂಡಿದರು. ನಂತರದಲ್ಲಿ ನೋಡುವುದಾದರೆ ಇತರೆ ದೇಶಗಳಿಗೆ ಜಾನಪದ ಪಸರಿಸಿತು. ಇದು ಉದ್ಯಮ ಪತಿಗಳ ತತ್ವದ ವಿರುದ್ಧವಾಗಿ ಹಾಗೂ ದುಡಿಯುವ ಜನರ ಬಿಡುವಿಗಾಗಿ ಹುಟ್ಟಿಕೊಂಡ ಜಾನಪದವೆಂದು ಹೇಳಬಹುದು ಎಂದು ವಿಶ್ಲೇಷಿಸಿದರು.
ಭಾರತದಲ್ಲಿ ಮಾನವ ಸಂಪನ್ಮೂಲ ಇರುವುದರಿಂದಲೇ ವಿದೇಶದಿಂದ ಉದ್ಯಮ ಪತಿಗಳು ಬರುತ್ತಿದ್ದಾರೆ. ನಮ್ಮನ್ನು ಬಳಸಿ ಬಿಸಾಡುತ್ತಾರೆ. ಹೀಗೆ ಬಳಸಿ ಬಿಸಾಡುವಿನಲ್ಲಿ ಮನುಷ್ಯನಿಗೆ ಜೀವನ, ಭಾವನೆ, ಸಂಸ್ಕೃತಿ ಇರುವುದಿಲ್ಲ. ಇವೆಲ್ಲವೂ ನಾಶವಾಗುತ್ತಿರುತ್ತದೆ. ಮನುಷ್ಯ ಬದುಕುವುದು ಹಣದಿಂದ ಮಾತ್ರವಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಗಿ ಬೇಕಿರುವುದು ಸೃಷ್ಟಿ ಅದನ್ನು ನಾವು ಉದ್ಯಮಗಳಿಗೆ ಕೊಟ್ಟಿದ್ದೇವೆ ಎಂದು ವಿಷಾದಿಸಿದರು.
ಸೂರ್ಯ ಮುಳಗದ ಸಾಮ್ರಾಜ್ಯವನ್ನು ಆಳುತ್ತಿದ್ದ ಇಂಗ್ಲೆಂಡ್‌ನಲ್ಲಿ ಕೈಗಾರಿಕೆಯೇ ಜಗತ್ತು ಎಂಬುದನ್ನು ಹೇಳುತ್ತಿದ್ದ ಹಾಗೂ ಭಾರತ ಸೇರಿದಂತೆ ಇತರೆ ದೇಶಗಳನ್ನು ಶೋಷಣೆ ಮಾಡುತ್ತಿದ್ದ ದೇಶದೊಳಗೇ ಜನರು ಸಿಡಿದೆದ್ದು, ನಮ್ಮ ಸಂಸ್ಕೃತಿಯ ಮೂಲಕ ನಾವು ಸೃಷ್ಟಿಯಾಗೋಣ ಎನ್ನುವ ಮೂಲಕ ಚಳವಳಿ ಹುಟ್ಟಿಕೊಂಡಿತು. ನಮಗೆ ಯಾವ ಸಂಸ್ಕೃತಿ ಮುಖ್ಯವೆಂದರೆ ಮಾತೃ ಸಂಸ್ಕೃತಿ ಎನ್ನೋಣ. ಇದು ಜಾನಪದ ಸೃಷ್ಟಿ. ಗಂಡು ಮೂಲವನ್ನು ಸೃಷ್ಟಿ ಮಾಡಲ್ಲ. ಹಾಗಾಗಿ ಸೃಷ್ಟಿ ಮತ್ತು ಪೋಷಣೆ ಮಹಿಳೆಯದ್ದಾಗಿದೆ ಎನ್ನುವುದು ಹುಟ್ಟಿಕೊಂಡಿತು. ಎಲ್ಲಿ ಶೋಷಣೆ ಹೆಚ್ಚಾಯಿತೋ ಅಲ್ಲಿ ಜಾನಪದ ಸೃಷ್ಟಿಯಾಯಿತು ಎಂದು ಪ್ರತಿಪಾದಿಸಿದರು.
ಆಂಧ್ರಪ್ರದೇಶದ ಮುಖ್ಯ ಆದಾಯ ತೆರಿಗೆ ಆಯುಕ್ತ ಜಯರಾಂ ರಾಯಪುರ ಮಾತನಾಡಿ, ಕರ್ನಾಟಕದಲ್ಲಿ ಬೇರೆ ರಾಜ್ಯಗಳಿಗಿಂತ ಜಾನಪದ ಇತಿಹಾಸಕ್ಕೆ ಹೆಚ್ಚಿನ ಮನ್ನಣೆ ಮತ್ತು ಗೌರವ ಕೊಟ್ಟಿದ್ದೇವೆ. ಬಹುಶಃ ಬೇರೆ ರಾಜ್ಯ ಮತ್ತು ರಾಷ್ಟ್ರಗಳ ಅಧ್ಯಯನ ಮಾಡುತ್ತಿದ್ದೇವೆ. ಇದನ್ನು ಯಾರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಬೇರೆ ರಾಜ್ಯ ಅಥವಾ ದೇಶದ ಜಾನಪದ ತೆಗೆದುಕೊಂಡರೆ ಕಳೆದ 1800 ವರ್ಷದಲ್ಲಿ ನಮ್ಮ ಕರ್ನಾಟಕದ ಜನಪದವೇ ಪ್ರಮುಖವಾಗಿ ಕಾಣುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದರು.
ಜಾನಪದ ಪರಂಪರೆಯ ಹಾಡಿದೆ, ನೃತ್ಯ ಇದೆ. ಆದರೆ ಆ ಪರಂಪರೆಯಲ್ಲಿರುವ ಅಚ್ಚುಕಟ್ಟುತನವನ್ನು ಉಳಿಸಿಕೊಳ್ಳಬೇಕು. ಪರಂಪರಗತವಾಗಿಯೇ ಉಳಿಸಿಕೊಳ್ಳಬೇಕು. ಯಾವುದೇ ಶುಭಸಮಾರಂಭಗಳು ನಡೆದರೆ ಅಲ್ಲಿ ಜಾನಪದ ಇರಬೇಕು. ಈ ಕಲೆಯನ್ನು ಆಧುನಿಕ ಕಲೆಯಲ್ಲಿ ಪ್ರದರ್ಶನಕ್ಕಿಟ್ಟಾಗ ಅದರ ಮೂಲ ಸ್ವರೂಪವನ್ನು ಕಳೆದುಕೊಳ್ಳಬಾರದು. ಸಿನಿಮಾದಲ್ಲಿ ಬಳಸಿಕೊಳ್ಳುತ್ತಾರೆ ಅಲ್ಲಿ ಮಾಡಿಕೊಳ್ಳಲಿ. ಆದರೆ ಅದರ ಮೂಲ ಸ್ವರೂಪ ಉಳಿಸಿಕೊಳ್ಳಬೇಕು. ಇದನ್ನು ಜಾನಪದ ಕಲಾವಿದರು ಮತ್ತು ತಂಡಗಳಿಗೆ ಕಾಳಜಿ ಇರಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅವರು ಜಿ.ನಾರಾಯಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಮಾಜಿ ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಯಕ ನಿರ್ದೇಶಕ ಬಿ.ವಿ.ನಂದೀಶ್, ಕಜಾಪ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ತಾಲೂಕು ಅಧ್ಯಕ್ಷ ಕಾರಸವಾಡಿ ಮಹದೇವ ಇತರರಿದ್ದರು. ಇದೇ ವೇಳೆ ಹಿರಿಯ ಜಾನಪದ ಕಲಾವಿದರನ್ನುಸನ್ಮಾನಿಸಲಾಯಿತು.