ಮಂಡ್ಯ: ಮೂಲ ಜನಪದ ಎಂಬುದು ನಮ್ಮ ನಾಡಿನ ಸಂಸ್ಕೃತಿ ಮತ್ತು ಕನ್ನಡ ಸಾಹಿತ್ಯ ಪರಂಪರೆಯ ತಾಯಿ ಬೇರು ಇದ್ದಂತೆ ಎಂದು ಹಿರಿಯ ಜಾನಪದ ಕಲಾವಿದ ಸಂಪಹಳ್ಳಿ ಎಸ್.ಸಿ.ಬಸವರಾಜು ಹೇಳಿದರು.
ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ಜಾನಪದ ಪರಿಷತ್ ಮಂಡ್ಯ ತಾಲೂಕು ಘಟಕ, ಜಾನಪದ ಜನ್ನೆಯರು, ತಗ್ಗಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನವರಸಗಳನ್ನು ಒಳಗೊಂಡಿರುವ ಮೂಲ ಜನಪದ ಕಲೆ ಮತ್ತು ಸಾಹಿತ್ಯವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವುದು ಪರಿಷತ್ತಿನ ಉದ್ದೇಶವಾಗಿದೆ. ಅನೇಕ ರೀತಿಯಲ್ಲಿ ಹುದುಗಿರುವ ಜಾನಪದ ಸಾಹಿತ್ಯವನ್ನು ಹೆಕ್ಕಿ ತೆಗೆದು ಸಂಗ್ರಹಿಸಿದರೆ ಅದನ್ನು ಭವಿಷ್ಯದ ಪೀಳಿಗೆವರೆಗೂ ತಲುಪಿಸಲು ಸಾಧ್ಯವಾಗಲಿದೆ. ಇಂತಹ ರಚನಾತ್ಮಕ ಕೆಲಸದಲ್ಲಿ ಪದವಿ ಮತ್ತು ಪ್ರೌಢಶಾಲಾ ತರಗತಿಯ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು. ಅಂತೆಯೇ ಜಾನಪದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ ಎಂದು ಹೇಳಿದರು.
ಉಪನ್ಯಾಸ ನೀಡಿದ ಉಪಪ್ರಾಂಶುಪಾಲ ಹನಿಯಂಬಾಡಿ ರಾಜು, ಜನಪದ ಎಂಬುದು ಸಾಂಸ್ಕೃತಿಕ, ಸಾಮಾಜಿಕ ವ್ಯವಸ್ಥೆಯ ಮೂಲವೇ ಆಗಿದೆ. ಜಾನಪದ ಮತ್ತು ಜನರ ಬದುಕಿನಲ್ಲಿ ಅವಿನಾಭಾವ ಸಂಬಂಧವಿದೆ. ನಡೆ ನುಡಿಯಲ್ಲಿ, ಆಹಾರ, ವೇಷಭೂಷಣ, ಕೃಷಿ, ಕಲೆ ಇವೆಲ್ಲವು ಜನಪದದ ಭಾಗಗಳಾಗಿವೆ ಎಂದು ಹೇಳಿದರು.
ಪರಿಷತ್ ಮಂಡ್ಯ ತಾಲೂಕು ಅಧ್ಯಕ್ಷ ಕಾರಸವಾಡಿ ಮಹದೇವು ಮಾತನಾಡಿ, ಮಕ್ಕಳಿಗೆ ಪರಿಷತ್ ವತಿಯಿಂದ ಜನಪದ ಗೀತೆಗಳನ್ನು ಹೇಳಿ ಕೊಡಲಾಗುವುದು. ಜತೆಗೆ ಕೋಲಾಟ, ಕಂಸಾಳೆ ಮುಂದಾದ ಕಲೆಗಳನ್ನು ಕಲಿಸಿಕೊಡಲಾಗುವುದು ಎಂದರು.
ಪ್ರಾಂಶುಪಾಲ ಎ.ಟಿ.ಕೆಂಪೇಗೌಡ ಅಧ್ಯಕ್ಷತೆ ವಹಿಸಿದ್ದರು. ಬಾಲಾಜಿ ಸೇವಾ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ಯಶೋಧಾ, ಅಂತಾರಾಷ್ಟ್ರೀಯ ಕಲಾವಿದ ಕೆ.ಜೆ.ಸುರೇಶ್, ಎಸ್‌ಡಿಎಂಸಿ ಅಧ್ಯಕ್ಷ ನಿಂಗೇಗೌಡ, ಪತ್ರಕರ್ತ ಡಿ.ದೇವರಾಜು ಕೊಪ್ಪ, ಜಾನಪದ ಜನ್ನೆಯರು ಬಳಗದ ಡಾ.ಎಸ್.ಸಿ.ಮಂಗಳಾ, ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಹನಿಯಂಬಾಡಿ ಎನ್.ಶೇಖರ್, ಕಲಾವಿದರಾದ ಎಚ್.ಪಿ.ವೈರಮುಡಿ, ಎಸ್.ಬಸವರಾಜು, ಗೊರವಾಲೆ ಚಂದ್ರಶೇಖರ್, ಉಮಾಶಂಕರ್, ರಾಜುಸ್ವಾಮಿ, ಜಿ.ಜಿ.ನವೀನ್‌ಕುಮಾರ್, ಮನೋಜ್, ವಾಗೀಶ್ ಚಂದ್ರಗುರು ಇದ್ದರು.
ಇದೇ ವೇಳೆ ಹಿರಿಯ ಜಾನಪದ ಕಲಾವಿದ ಯರಹಳ್ಳಿ ಗ್ರಾಮದ ವೈ.ಎಸ್.ಭದ್ರಶೆಟ್ಟಿ ಅವರನ್ನು ಪರಿಷತ್‌ನಿಂದ ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳಿಗೆ ಮೂಲ ಜನಪದ ಗೀತೆಗಳನ್ನು ಹೇಳಿಕೊಟ್ಟು ರಂಜಿಸಲಾಯಿತು. ಅಂತೆಯೇ ಜನಪದ ಗೀತೆ ಹಾಗೂ ಆಶುಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.