ಜಿಲ್ಲೆ

ಮಾಲಿನ್ಯ ನಿಯಂತ್ರಣಕ್ಕೆ ಜೀವನ ಶೈಲಿ ಬದಲಾವಣೆ ಅಗತ್ಯ

ಗೋಪಾಲಕೃಷ್ಣ ಪಾದೂರ್

ಉಡುಪಿ: ಮನುಷ್ಯನ ಉಳಿವಿಗೆ ಪರಿಸರ ಹಾಗೂ ಜೀವ ವೈವಿಧ್ಯ ತನ್ನದೇ ಆದ ಕೊಡುಗೆ ನೀಡಿದೆ. ಜೀವನ ಶೈಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ದೈನಂದಿನ ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕಿರಣ್​ ಸಿದ್ದಪ್ಪ ಗಂಗಣ್ಣವರ್​ ಹೇಳಿದರು.

ಬುಧವಾರ ಮಣಿಪಾಲ ರಜತಾದ್ರಿಯ ಅಟಲ್​ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡಬೇಕು. ಪರಿಸರದ ಬಗ್ಗೆ ಕಾಳಜಿ ವಹಿಸದಿದ್ದರೆ ಬದುಕು ದುಸ್ತರವಾಗುತ್ತದೆ. ಪ್ಲಾಸ್ಟಿಕ್​ ಪರಿಸರಕ್ಕೆ ಮಾರಕವಾದ ವಸ್ತು. ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್​ನ ಕಡಿಮೆ ಬಳಕೆ, ಮರುಬಳಕೆ ಅಥವಾ ನಿಷೇಧದ ಮೂಲಕ ಅದರ ದುಷ್ಪರಿಣಾಮ ತಡೆಯಲು ಸಾಧ್ಯವಾಗಲಿದೆ ಎಂದರು.

ಎಂ.ಐ.ಟಿ ಸಿವಿಲ್​ ಇಂಜಿನಿಯರಿಂಗ್​ ವಿಭಾಗದ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಮದ್ದೋಡಿ ಉಪನ್ಯಾಸ ನೀಡಿ ಮಾತನಾಡಿ, ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಪರಿಸರ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗಿರದೇ ಅದನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕು. ಯುವ ಜನಾಂಗದಿಂದ ಯಾವುದೇ ಕೆಲಸ ಕಾರ್ಯಗಳು ಸಮರ್ಪಕವಾಗಿ ಅನುಷ್ಠಾನವಾಗಲು ಸಾಧ್ಯ. ಪರಿಸರ ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಯುವ ಶಕ್ತಿಯು ಇಡೀ ಸಮುದಾಯಕ್ಕೆ ಅರಿವು ಮೂಡಿಸಬೇಕು. ಪ್ಲಾಸ್ಟಿಕ್​ ಮುಕ್ತ ಪರಿಸರ ನಿಮಾರ್ಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಪ್ರಮುಖವಾದುದು ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಡಿ.ಪಿ ಮಹೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆ-2024 ರ ಅಂಗವಾಗಿ ಶಾಲಾ ಮಕ್ಕಳಿಗಾಗಿ ಆಯೋಜಿಸಲಾದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಎಸ್​ಪಿ ಸಿದ್ಧಲಿಂಗಪ್ಪ, ಹಿರಿಯ ಸಿವಿಲ್​ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಪುರುಷೋತ್ತಮ, ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ನಾಗರಾಜ್​ ಮತ್ತಿತರರು ಉಪಸ್ಥಿತರಿದ್ದರು. ಉಪ ಪರಿಸರ ಅಧಿಕಾರಿ ಡಾ. ಅಮೃತಾ ಎ.ಎಸ್​ ಸ್ವಾಗತಿಸಿ, ಶಿವಪ್ರಸಾದ್​ ಅಡಿಗ ನಿರೂಪಿಸಿ, ಪರಿಸರ ಇಲಾಖೆಯ ಸಿಬ್ಬಂದಿ ರಾಜೇಶ್ವರಿ ವಂದಿಸಿದರು.