ಉಡುಪಿ: ಮನುಷ್ಯ ಸೇರಿದಂತೆ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಸಂಕುಲ ಪರಿಸರವನ್ನು ಅವಲಂಬಿಸಿದೆ. ಮಾನವನ ದುರಾಸೆಯಿಂದ ಗಾಳಿ, ನೀರು, ಆಹಾರ ಕಲುಷಿತವಾಗುತ್ತಿದೆ. ಸಮಾಜವನ್ನು ಪರಿಸರದ ರಕ್ಷಣೆಗೆ ಉತ್ತೇಜಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಹೊಣೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಪರಿಸರದ ಸ್ವಾಸ್ಥ$್ಯ ಹದಗೆಡಿಸುತ್ತಿದೆ. ಪ್ಲಾಸ್ಟಿಕ್ಗಳು ನೀರಿನ ಮೂಲಗಳಲ್ಲಿ ಸೇರಿ ಜಲಚರಗಳು, ಸಸ್ಯ ಪ್ರಬೇಧ ಹಾಗೂ ಜೀವ ಸಂಕುಲಕ್ಕೆ ಹಾನಿ ಉಂಟುಮಾಡುತ್ತಿದ್ದು, ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತಿವೆ. ಆದ್ದರಿಂದ ಏಕಬಳಕೆ ಪ್ಲಾಸ್ಟಿಕ್ ತ್ಯಜಿಸಬೇಕು ಎಂದರು. ವಿದ್ಯಾರ್ಥಿಗಳು ಪರಿಸರದ ರಾಯಭಾರಿಗಳು. ಮನುಷ್ಯ ಅಭಿವೃದ್ಧಿಯ ಹೆಸರಿನಲ್ಲಿ ಕಾಡನ್ನು ಹಾಳು ಮಾಡದೇ, ಕಾಡು ಪ್ರಾಣಿಗಳು ಅರಣ್ಯ ಪ್ರದೇಶಗಳಲ್ಲಿ ವಾಸಿಸಲು ಅನುವು ಮಾಡಿಕೊಡಬೇಕು. ಕೃಷಿ ಸೇರಿದಂತೆ ಮತ್ತಿತರ ಚಟುವಟಿಕೆಗಳಿಗೆ ಸಾವಯವ ಗೊಬ್ಬರ ಬಳಸಬೇಕು. ಮಣ್ಣಿನ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಭಾರ ಉಪನಿರ್ದೇಶಕ ಅಶೋಕ್ ಕಾಮತ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಚಿತ್ರಕಲಾ ಸ್ಪರ್ಧೆಯ ವಿಜೇತರುಗಳಿಗೆ ಬಹುಮಾನ ವಿತರಿಸಲಾಯಿತು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸಿ ಎಂಬ ಘೋಷಣೆಯೊಂದಿಗೆ ಕಿರು ನಾಟಕ ಪ್ರದರ್ಶನ ನಡೆಯಿತು.
ಮಣಿಪಾಲ ಎಂ.ಐ.ಟಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಮದ್ದೋಡಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಳಿ ಮಂಡಳಿಯ ಪ್ರಾದೇಶಿಕ ಅಧಿಕಾರಿ ಕೆ. ಕೀರ್ತಿ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿವಪ್ರಸಾದ್ ಅಡಿಗ ಶಿವಪುರ ನಿರೂಪಿಸಿ, ರಾಜೇಶ್ವರಿ ವಂದಿಸಿದರು.
ಪರಿಸರ ಅಸಮತೋಲನದಿಂದ ಪ್ರಕೃತಿವಿಕೋಪ ಭೂಮಿಯ ಮೇಲೆ ಪ್ರತಿ ಜೀವಿಗಳಿಗೂ ಬದುಕುವ ಹಕ್ಕಿದೆ. ಪರಿಸರದಲ್ಲಾಗುವ ಹವಾಮಾನ ಬದಲಾವಣೆ, ಬರಗಾಲ, ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಮತ್ತಿತರ ಹಾನಿಗಳಿಗೆ ಮನುಷ್ಯ ಒಂದಲ್ಲಾ ಒಂದು ರೀತಿಯಲ್ಲಿ ಕಾರಣೀಕರ್ತನಾಗಿದ್ದಾನೆ. ಪರಿಸರ ಅಸಮತೋಲನದಿಂದ ಪ್ರಾಕೃತಿಕ ವಿಕೋಪ ಸಂಭವಿಸುತ್ತದೆ. ಈ ನಿಟ್ಟಿನಲ್ಲಿ ಮನುಷ್ಯ ಪರಿಸರ ಸ್ನೇಹಿ ಹವ್ಯಾಸ ರೂಢಿಸಿಕೊಳ್ಳಬೇಕು. ಪ್ರತಿಕ್ ಬಾಯಲ್ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ