ಉಡುಪಿ: ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಪರಿಸರ ಸಮತೋಲನ ಕಾಪಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಶಾಂತವೀರ ಶಿವಪ್ಪ ಹೇಳಿದರು.
ಸೋಮವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಪ್ರತೀ ವರ್ಷ ಶೇ. 1.5 ರಷ್ಟು ಅರಣ್ಯದ ಬೆಳವಣಿಗೆ ಆಗುತ್ತಿದ್ದು , ಹಸಿರು ವಲಯ ಹೆಚ್ಚಳವಾಗುತ್ತಿರುವುದು ಸಂತಸದ ಸಂಗತಿ. ಪರಿಸರ ಸಂರಕ್ಷಣೆಗಾಗಿ ಗಿಡಗಳನ್ನು ನೆಡುವಾಗ ಪರಿಸರಕ್ಕೆ ಸೂಕ್ತವಾದ ಹಾಗೂ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸಮತೋಲನ ಕಾಪಾಡಬೇಕು. ಅರಣ್ಯ ಪ್ರದಶದಲ್ಲಿ ಹಣ್ಣಿನ ಗಿಡಗಳನ್ನು ನೆಡುವುದರಿಂದ ಮಾನವ ಮತ್ತು ವನ್ಯ ಜೀವಿ ಸಂಘರ್ಷ ತಡೆಯಲು ಸಾಧ್ಯ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಮಾತನಾಡಿ, ಪರಿಸರ ನಾಶದಿಂದ ಮಾನವ ಹಾಗೂ ಪ್ರಾಣಿ ಸಂಕುಲದ ನಾಶವಾಗಲಿದ್ದು, ಅಂತರ್ಜಲ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಪ್ರಮುಖವಾದುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಪ್ರಕೃತಿಯು ಮಾನವನ ಸಹಜ ಅವಶ್ಯಕತೆಗಳನ್ನು ಪೂರೈಸಲಿದೆ ಆದರೆ ದುರಾಸೆಗಳನ್ನಲ್ಲ. ಉಡುಪಿ ಜಿಲ್ಲೆ ನೈಸರ್ಗಿಕ ಸಮೃದ್ದಿಯಿಂದ ಕೂಡಿದ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿನ ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರಲ್ಲೂ ಸ್ವಯಂ ಜಾಗೃತಿ ಮೂಡಬೇಕು ಎಂದರು.
ಪರಿಸರ ದಿನಾಚರಣೆ ಅಂಗವಾಗಿ ನಡೆದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪರಿಸರ ಸಂರಕ್ಷಣೆ ಕುರಿತಂತೆ ಪ್ರತಿಜ್ಞಾ ವಿಧಿ ಭೋದಿಸಲಾಯಿತು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಗಣಪತಿ, ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ನ ಆಯುಕ್ತ ಡಾ.ವಿಜಯೇಂದ್ರ ವಸಂತ ರಾವ್ ಉಪಸ್ಥಿತರಿದ್ದರು. ಜಿಲ್ಲಾ ಪ್ರಾದೇಶಿಕ ಪರಿಸರ ಅಧಿಕಾರಿ ಡಾ.ಕೆ.ಎಂ. ರಾಜು ಸ್ವಾಗತಿಸಿದರು. ಪ್ಲಾಸ್ಟಿಕ್ ಮಾಲಿನ್ಯ ಮತ್ತು ಪರಿಹಾರಗಳ ಬಗ್ಗೆ ಜೋಸೆಫ್ ಎಂ ರೆಬೆಲ್ಲೂ ವಿಶೇಷ ಉಪನ್ಯಾಸ ನೀಡಿದರು. ಸಹಾಯಕ ಪರಿಸರ ಅಧಿಕಾರಿ ಅಮೃತಾ ವಂದಿಸಿದರು.