ವಿಜಯಪುರ ತಾಲೂಕಿನ ಅರಕೇರಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆಯ ಅಂಗವಾಗಿ ಸಸಿ ನೆಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೂಲ್ಮಟ್ಟಿ, ಪೀರ್‌ಪಟೇಲ್ ಪಾಟೀಲ್, ಅಶೋಕ ಭಂಡಾರಿ ಮತ್ತಿತರರಿದ್ದಾರೆ.  
ಜಿಲ್ಲೆ

ಅರಕೇರಿಯಲ್ಲಿ ವಿಶ್ವ ಪರಿಸರ ದಿನ ಆಚರಣೆ, ಸಸಿ ನೆಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೂಲ್ಮಟ್ಟಿ ಹೇಳಿದ್ದೇನು ಗೊತ್ತಾ?

ವಿಜಯಪುರ: ನೀರಿಗೆ ನೈದಿಲೆಯೇ ಸಿಂಗಾರವಾದರೆ ನಾಡಿಗೆ ಕಾಡು ಸಿಂಗಾರ. ಹೀಗಾಗಿ ಕಾಡು ಬೆಳೆಸಿ ನಾಡು ಉಳಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೂಲ್ಮಟ್ಟಿ ಹೇಳಿದರು.

ತಾಲೂಕಿನ ಅರಕೇರಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಅಗಸ್ತ್ಯ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪ್ರಕೃತಿಯ ಪೋಷಣೆ, ರಕ್ಷಣೆ ಪ್ರತಿಯೊಬ್ಬರ ಹೊಣೆ. ಪರಿಸರದ ರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಬದಲಾಗಿ ಎಲ್ಲ ಸಮುದಾಯದ ಜವಾಬ್ದಾರಿ. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕೆಂದರು.

ಮುಖಂಡ ಪೀರ್‌ಪಟೇಲ್ ಪಾಟೀಲ್ ಮಾತನಾಡಿ, ಸಸಿ ನೆಡುವ ಕಾರ್ಯಕ್ರಮ ನಿರಂತರವಾಗಿರಬೇಕು. ಹಸಿರು ಉಳಿದರೆ ಮಾತ್ರ ಉಸಿರು ಉಳಿಯಲು ಸಾಧ್ಯ. ಹೀಗಾಗಿ ಮನೆಗೊಂದು ಮರ ಬಳೆಸಿ ಊರಿಗೊಂದು ವನ ಬೆಳೆಸಬೇಕೆಂದು ಕರೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಗುರು ಆರ್.ಎ. ಮುಲ್ಲಾ ಹಾಗೂ ಶಿಕ್ಷಕ ಸಿದ್ದರಾಮ ಎಸ್.ಕೋಳಿ ಮಾತನಾಡಿದರು.

ಎಸ್.ಜಿ. ಕರಕಿ, ಕಾಂತು ಗೌಡಪಾಟೀಲ, ಚಂದ್ರಶೇಖರ ಅಂಬಿಗೇರ, ವಿನೋದ ದಳವಾಯಿ, ರೇವಣಸಿದ್ದಪ್ಪ ನಾಗರಾಳ, ಅಮಸಿದ್ದ ಒಡೆಯರ, ಲಕ್ಷ್ಮಣ ರಾಠೋಡ, ಭೀಮಣ್ಣ ಶಿಂಧೆ, ಮಲಕಾರಿ ಸೊನ್ನದ, ನೀಲಮ್ಮ ಕಾಂಬಳೆ, ಎಸ್.ಡಿ. ಮೋಸಲಗಿ, ಸಂತೋಷ ಮದಕವಿ ಮತ್ತಿತರರಿದ್ದರು. ಶಿಕ್ಷಕ ಎಸ್.ಜಿ. ಚವಾಣ್ ನಿರ್ವಹಿಸಿದರು.