ಗದ್ದನಕೇರಿ ಕ್ರಾಸ್ ಬಳಿ ತಿಮ್ಮಕ್ಕ ವೃಕ್ಷೋದ್ಯಾನ ಸ್ಮತಿ ವನದಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಬೀಳಗಿ ಶಾಸಕ ಜೆ.ಟಿ.ಪಾಟೀಲ ಸಸಿ ನೆಟ್ಟರು. ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಅರಣ್ಯ ಇಲಾಖೆಯ ವಲಯ ಸಂರಕ್ಷಣಾಧಿಕಾರಿ ಬಿ.ಎಸ್.ಬೆನಕಟ್ಟಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಕನಿಷ್ಕ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಜಿಪಂ ಉಪವಿಭಾಗಾಧಿಕಾರಿ ಎನ್.ವೈ.ಬಸರಿಗಿಡದ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಇದ್ದರು. 
ಜಿಲ್ಲೆ

ಸ್ಮತಿ ವನದಲ್ಲಿ ವಿಶ್ವ ಪರಿಸರ ದಿನಾಚರಣೆ

ದತ್ತಾತ್ರೇಯ ಪಿ ಕುಲಕರ್ಣಿ

ಬಾಗಲಕೋಟೆ: ಅಳಿವಿನ ಅಂಚಿನಲ್ಲಿರುವ ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಜರುಗುವ ಹುಟ್ಟುಹಬ್ಬ, ಮದುವೆ ಹಾಗೂ ಇತರ ಶುಭ ಸಮಾರಂಭಗಳಲ್ಲಿ ಸಸಿಗಳನ್ನು ವಿತರಿಸಿ ಪರಿಸರ ಪ್ರೇಮ ಮೆರೆಯಬೇಕು ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.

ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ಇರುವ ಅರಣ್ಯ ಇಲಾಖೆಯ ತಿಮ್ಮಕ್ಕ ವೃಕ್ಷೋದ್ಯಾನ ಸ್ಮತಿ ವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಪರಿಸರ ರಕ್ಷಣೆಗೆ ಬದ್ಧರಾಗಬೇಕು. ತಾವು ತಮ್ಮ ಶುಭ ಕಾರ್ಯಗಳಲ್ಲಿ ನೆಡಲಾದ ಮರ, ಗಿಡಗಳನ್ನು ನೆನಪಿಸಿಕೊಳ್ಳಲು ಅರಣ್ಯ ಇಲಾಖೆ ತಿಮ್ಮಕ್ಕ ವೃಕ್ಷೋದ್ಯಾನ ಸ್ಮತಿವನದಲ್ಲಿ ತಾವು ನೆಟ್ಟ ಸಸಿಗೆ ತಮ್ಮ ಹೆಸರು ಇಡುತ್ತದೆ. ಇದೊಂದು ವಿನೂತನ ಪ್ರಯೋಗವಾಗಿದೆ ಎಂದರು.

ಬೀಳಗಿ-ಬಾಗಲಕೋಟೆ ತಾಲೂಕುಗಳು ಆಲಮಟ್ಟಿ ಹಿನ್ನೀರಿನಲ್ಲಿ ಬಾಧಿತಗೊಂಡಿದ್ದು, ಈ ಭಾಗದ ಅನೇಕ ಅರಣ್ಯ ಸಂಪತ್ತು ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಅದನ್ನು ಪುನಶ್ಚೇತನಗೊಳಿಸುವ ಕಾರ್ಯ ನಮ್ಮದಾಗಿದೆ. ಪರಿಸರ ಪ್ರೇಮಿಗಳಿಗೆ ಗಿಡ-ಮರಗಳನ್ನು ಬೆಳೆಸಲು ಸಮಯವೇ ಸಿಗುತ್ತಿಲ್ಲವೆಂಬುವವರಿಗೆ ರಜೆ ದಿನದಲ್ಲಿ ಒಂದು ದಿನ ಇಲ್ಲಿ ಸ್ಮತಿ ವನದಲ್ಲಿ ನೆಡಲಾದ ಗಿಡವನ್ನು ತಮಗೆ ಇಷ್ಟವಾದ ಗಿಡ ಆಯ್ಕೆ ಮಾಡಿಕೊಂಡು 500 ರೂ. ಪಾವತಿಸಿದರೆ, ನಿಮ್ಮ ಹೆಸರಿನಲ್ಲಿ ಆ ಮರವನ್ನು ಸುರಕ್ಷಿತವಾಗಿ ಬೆಳೆಸಲಾಗುವುದು ಎಂದು ಭರವಸೆ ನೀಡಿದರು.

ಮುಂಬರುವ ದಿನಗಳಲ್ಲಿ ಬೀಳಗಿ ತಾಲೂಕಿನ ಯಡಹಳ್ಳಿ ಪ್ರವೇಶದಲ್ಲಿ ಚಿಂಕಾರ ಪ್ರಾಣಿ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದ್ದು, ಅರಣ್ಯ ರಕ್ಷಣೆಗಾಗಿ ಅನೇಕ ಜನ ಆಸಕ್ತರಿದ್ದು, ಅದರಲ್ಲೂ ಯಡಹಳ್ಳಿ ಗ್ರಾಮದ ಡಾ.ಎಂ.ಆರ್.ದೇಸಾಯಿ ಅವರ ಪಾತ್ರ ಬಹು ಮುಖ್ಯವಾಗಿದೆ. ಅರಣ್ಯ ಅಭಿವೃದ್ಧಿ ಪಡಿಸುವುದರ ಜತೆಗೆ ಚಿಕ್ಕ ಸಂಗಮದ ಹಿನ್ನೀರಿನಲ್ಲಿ ಆಗಮಿಸುತ್ತಿರುವ ಅನೇಕ ಪಕ್ಷಿಗಳನ್ನು ಸಂರಕ್ಷಿಸುವ ಪಕ್ಷಿಧಾಮ ಸ್ಥಾಪಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿದೆ ಎಂದರು.

ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮಾತನಾಡಿ, ಪರಿಸರ ನಮಗಾಗಿ ಏನೆಲ್ಲ ನೀಡುತ್ತಿದ್ದು, ಅದರ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಗಿಡ, ಮರಗಳನ್ನು ನೆಡುವುದನ್ನು ರೂಢಿಸಿಕೊಂಡರೆ, ತನ್ನಿಂದ ತಾನೇ ಪರಿಸರ ಬೆಳೆಯುತ್ತದೆ. ಪರಿಸರ ಪ್ರೇಮಿಗಳಿಗಾಗಿ ಅರಣ್ಯ ಇಲಾಖೆ ವಿವಿಧ ತಳಿಗಳ ಗಿಡ ಮರಗಳನ್ನು ವಿತರಿಸಲಾಗುತ್ತಿದ್ದು, ತಮ್ಮ ಹೊಲ ಗದ್ದೆಗಳಲ್ಲಿ ನೆಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಅರಣ್ಯ ಇಲಾಖೆ ವಲಯ ಸಂರಕ್ಷಣಾಧಿಕಾರಿ ಬಿ.ಎಸ್.ಬೆನಕಟ್ಟಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಕನಿಷ್ಕ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಜಿ.ಪಂ ಉಪವಿಭಾಗಾಧಿಕಾರಿ ಎನ್.ವೈ.ಬಸರಿಗಿಡದ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಡಿಎಫ್ಒಳಗಾದ ಪ್ರಶಾಂತ ಸಂಕಿನಮಠ, ಸಿ.ಜಿ.ಮಿರ್ಜಿ, ಎಸಿಎ್ ಚಂದ್ರಶೇಖರ ಪಾಟೀಲ, ಅರಣ್ಯ ಇಲಾಖೆಯ ರಾಮಸ್ವಾಮಿ, ಶಬ್ಬೀರ್ ಮುಜಾವರ, ಅಮೀನ್ ಗುಜರಾತಿ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.