ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಹೆದ್ದಾರಿ ಅಗಲೀಕರಣದ ಕಾಮಗಾರಿಗೆ ಅನಿವಾರ್ಯವಾಗಿ ಹಲವಾರು ಮರಗಳನ್ನು ಕಡಿಯಬೇಕಾದ ಸ್ಥಿತಿ ಎದುರಾಗಿದ್ದು, ಕಡಿಯಲ್ಪಟ್ಟ ಮರಗಳ ಬದಲಿಗೆ ದುಪ್ಪಟ್ಟು ಗಿಡ ಮರಗಳನ್ನು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಮುಂದಿನ ಜನಾಂಗದ ಬದುಕನ್ನು ಹಸಿರಾಗಿಸಲು ನಾವಿಂದು ಭೂಮಿಯನ್ನು ಹಸಿರಾಗಿಸಲೇಬೇಕಾಗಿದೆ ಎಂದು ಹೆದ್ದಾರಿ ಅಗಲೀಕರಣದ ಪ್ರಾಜೆಕ್ಟ್ ಮೇನೇಜರ್ ಮಹೇಂದ್ರ ಕುಮಾರ್ ಸಿಂಗ್ ಕರೆ ನೀಡಿದರು.
ಬುಧವಾರ ಗೋಳಿತೊಟ್ಟು ಪರಿಸರದಲ್ಲಿ ಹೆದ್ದಾರಿ ಇಲಾಖಾ ಪ್ರಾಧಿಕಾರದ ವತಿಯಿಂದ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ ಹಾಗೂ ಹೆದ್ದಾರಿ ವಿಭಜಕದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೆಎನ್‌ಆರ್ ಸಂಸ್ಥೆಯ ಅಧಿಕಾರಿ ಟಿ.ಎಲ್.ಪಟ್ನಾಯಕ್ ಮಾತನಾಡಿ, ಹೆದ್ದಾರಿ ಅಗಲೀಕರಣ ನಡೆಯುವ 49 ಕಿ.ಮೀ.ಉದ್ದಕ್ಕೂ ಹೆದ್ದಾರಿ ವಿಭಜಕ ಪ್ರದೇಶದಲ್ಲಿ ಯೋಜನಾ ಬದ್ಧವಾಗಿ ಗಿಡಗಳನ್ನು ನೆಡಲಾಗುವುದು ಹಾಗೂ ಅವಕಾಶವಿರುವೆಡೆಗಳಲ್ಲಿ ಹೆದ್ದಾರಿಯ ಉಭಯ ಪಾರ್ಶ್ವದಲ್ಲೂ ಮರಗಿಡಗಳನ್ನು ನೆಡಲಾಗುವುದು. ಮಾತ್ರವಲ್ಲದೆ ಮುಂದಿನ ಹತ್ತು ವರ್ಷಗಳ ಕಾಲ ಅದರ ರಕ್ಷಣೆ ಹಾಗೂ ಪೋಷಣೆಯನ್ನು ಮಾಡಲಾಗುವುದೆಂದರು.
ಅರಣ್ಯ ಇಲಾಖೆ ಅಧಿಕಾರಿ ಸಂದೀಪ್ ಮಾತನಾಡಿ, ಹೆದ್ದಾರಿ ಕಾಮಗಾರಿಯ ವೇಳೆ ಅನಿವಾರ್ಯ ಸಮಯದಲ್ಲಿ ಮಾತ್ರ ಮರಗಳನ್ನು ಕಡಿಯಲಾಗಿದೆ. ಸಣ್ಣ ಅವಕಾಶ ದೊರಕಿದ್ದಲ್ಲೆಲ್ಲ ಮರಗಳನ್ನು ರಕ್ಷಿಸಲಾಗಿದೆ. ಈ ನಿಟ್ಟಿನಲ್ಲಿ ಹೆದ್ದಾರಿ ಇಲಾಖಾಧಿಕಾರಿಗಳ ಸಹಕಾರ ಶ್ಲಾಘನೀಯವೆನಿಸಿದೆ ಎಂದರು.
ವಿನೋದ್ ಕುಮಾರ್, ಬಿನತ್ ಕುಮಾರ್, ಗಿರೀಶ್, ವಿವೇಕಾನಂದ, ಶ್ರೀನಿವಾಸ್, ನಂದ ಕುಮಾರ್, ಮೊದಲಾದವರು ಭಾಗವಹಿಸಿದ್ದರು.