ಕಾಸರಗೋಡು: ಜನಮೈತ್ರಿ ಶಿಶು ಸೌಹಾರ್ದ ಪೊಲೀಸ್ ಠಾಣೆ ಹಾಗೂ ತಳಂಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಕಾಸರಗೋಡು ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಾಜಿ ಪಟ್ಟೇರಿ ಉದ್ಘಾಟಿಸಿ ಮಾತನಾಡಿ, ಪರಿಸರ ಸಂರಕ್ಷಣೆಯಿಂದ ಮಾತ್ರ ಜೀವಸಂಕುಲಗಳಿಗೆ ಬದುಕು ನಡೆಸಲು ಸಾಧ್ಯ. ಮನುಕುಲದ ಶ್ರೇಯಸ್ಸಿಗಾಗಿ ಸಸಿಗಳನ್ನು ನೆಟ್ಟು ಪೋಷಿಸುವುದು ಪ್ರತಿಯೊಬ್ಬನ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನೌಫಲ್ ತಾಯಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಬಿಂದು ಟೀಚರ್, ಕಾಸರಗೋಡು ಮಕ್ಕಳ ಕಲ್ಯಾಣಾಧಿಕಾರಿ ಶಶಿಧರನ್, ಸಹಾಯಕ ಮಕ್ಕಳ ಕಲ್ಯಾಣ ಅಧಿಕಾರಿ ಸೋನಿಯಾ ಜಿಲ್‌ಜೋ ಜುಡಿತ್, ಸುಚೇತಾ ಮತ್ತು ರಾಜೇಶ್ ಉಪಸ್ಥಿತರಿದ್ದರು. ಪರಿಸರ ದಿನಾಚರಣೆ ಅಂಗವಾಗಿ ಶಾಲಾ ವಠಾರದಲ್ಲಿ ಸಸಿಗಳನ್ನು ನೆಡಲಾಯಿತು.