ವಿಜಯವಾಣಿ ಸುದ್ದಿಜಾಲ ಉಡುಪಿ
ಪ್ರಕೃತಿಯ ಕುರಿತಾದ ಮಾನವನ ಅಜ್ಞಾನವು ಹಲವು ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಪ್ರಕೃತಿಯ ನಿರ್ವಹಣೆಯಲ್ಲೂ ಅದರದ್ದೇ ಆದ ಲಯವಿದೆ. ಗಿಡ&ಮರಗಳು, ಬೆಟ್ಟ&ಗುಡ್ಡ, ಪ್ರಾಣಿ-ಪಕ್ಷಿಗಳು ಪ್ರಕೃತಿಗೆ ಪೂರಕವಾಗಿ ವರ್ತಿಸುತ್ತದೆ. ಅದನ್ನು ನಾವು ಅರ್ಥ ಮಾಡಿಕೊಂಡು ಪರಿಸರವನ್ನು ಅಂತರಂಗದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಉರಗ ತಜ್ಞ ಗುರುರಾಜ ಸನಿಲ್ ಆಶಿಸಿದರು.
ಉಡುಪಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಆಶ್ರಯದಲ್ಲಿ ಡಾ. ಜಿ.ಶಂಕರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಯುವ ರೆಡ್ ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಜೂನ್ 5ರಂದು ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಪರಿಸರ ಮತ್ತು ಜೀವನ ವಿಷಯ ಕುರಿತು ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಸೋಜನ್ ಕೆ.ಜಿ. ಅಧ್ಯಕ್ಷತೆ ವಹಿಸಿದ್ದರು. ಸ್ನಾತಕೋತ್ತರ ವಿಭಾಗದ ಸಂಚಾಲಕ ರವಿ ಪ್ರಸಾದ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಮಚಂದ್ರ ಪಾಟ್ಕರ್, ಯುವ ರೆಡ್ಕ್ರಾಸ್ ಸಂಯೋಜಕಿ ಡಾ. ದಿವ್ಯಾ ಎಂ.ಎಸ್., ರೆಡ್ಕ್ರಾಸ್ ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ವಿದ್ಯಾ ಮತ್ತು ಹರ್ಷಿತಾ ನಾಡಗೀತೆ ಹಾಡಿದರು. ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾ. ನಿಕೇತನಾ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ರೆಡ್ ಕ್ರಾಸ್ ಖಜಾಂಚಿ ರಮಾದೇವಿ ವಂದಿಸಿದರು.