ಜಿಲ್ಲೆ

ಬಾಲಕಾರ್ಮಿಕರ ಪದ್ಧತಿ ನಿರ್ಮೂಲನೆಯಾಗಲಿ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಹೆಣ್ಣು ಭ್ರೂಣ ಹತ್ಯೆಗಳಂತಹ ಪ್ರಕರಣಗಳನ್ನು ಕೇವಲ ಸರ್ಕಾರ ಪತ್ತೆ ಹಚ್ಚಿದರೆ ಸಾಲದು. ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಿದಾಗ ಮಾತ್ರ ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಬಾಲಕಾರ್ಮಿಕ ಪದ್ಧತಿ ಸಾಮಾಜಿಕ ಕಳಂಕವಾಗಿದೆ. ಇದು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಬೇಕಾದ ಪ್ರಮುಖ ವಿಷಯ. ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸುವ ಹೊಣೆಗಾರಿಕೆ ನಮ್ಮೆಲ್ಲರದು ಎಂದರು.

ಸಾರ್ವಜನಿಕರು ಪ್ರಜ್ಞಾವಂತರಾಗಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದರೆ ಇಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸಬಹುದಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯಲ್ಲಿ 6-14 ವರ್ಷದ ಮಕ್ಕಳಿಗೆ ಉಚಿತ ಕಡ್ಡಾಯ ಎಂದು ಕಾನೂನು ಇದ್ದರೂ ಸಹ ಆಧುನಿಕ ಯುಗದಲ್ಲೂ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳಿಗೆ ಸರಿಯಾದ ಶಿಕ್ಷಣ ಹಾಗೂ ನೈತಿಕ ಮೌಲ್ಯಗಳನ್ನು ತಿಳಿಸದೆ ಇದ್ದರೆ ಸಮಾಜಕ್ಕೆ ಮಾರಕರಾಗುತ್ತಾರೆ. ದುಡಿಯಲು ಹೋದ ಬಾಲಕಾರ್ಮಿಕರು ಕೆಲಸದ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆಗಳ ದಾರಿ ಹಿಡಿಯುವ ಸಾಧ್ಯತೆ ಹೆಚ್ಚು ಇರುತ್ತದೆ. ಬಾಲ ಕಾರ್ಮಿಕರನ್ನು ರಕ್ಷಿಸಲು ಅನೇಕ ಕಾಯ್ದೆಗಳಿವೆ. ಕಾಯ್ದೆಗಳಿಗಿಂತ ಮುಖ್ಯವಾದದ್ದು ಮಾನವೀಯತೆ ಮತ್ತು ಹೃದಯವಂತಿಕೆ. ಸಮಾಜದಲ್ಲಿ ನಡೆಯುತ್ತಿರುವ ತಪ್ಪುಗಳನ್ನು ಸಾಮಾಜಿಕ ಕಳಕಳಿ ಹಾಗೂ ಹೊಣೆಗಾರಿಕೆಯಿಂದ ಪ್ರಶ್ನೆ ಮಾಡಬೇಕು ಎಂದು ತಿಳಿ ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್ ಮಾತನಾಡಿ, 2002ರಿಂದ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಇದರ ಪ್ರಮುಖ ಉದ್ದೇಶ 14 ವರ್ಷಗಳ ಒಳಗಿನ ಮಕ್ಕಳನ್ನು ದುಡಿಯಲು ಕಾರ್ಖಾನೆ, ಹೋಟೆಲ್ ಹಾಗೂ ಇನ್ನಿತರೆ ಸ್ಥಳಗಳಿಗೆ ಕಳಿಸದಿರಲಿ ಎಂದಾಗಿದೆ. 14 ವರ್ಷದೊಳಗಿನ ಮಕ್ಕಳು ಕೆಲಸ ಮಾಡುವುದು ಕಾನೂನು ಬಾಹಿರ ಎಂದು ಹೇಳಿದರು.

ಬಾಲ ಕಾರ್ಮಿಕ ಪದ್ಧತಿಯನ್ನು ತಡೆಯಲು ಮೊದಲು ನಮಗೆ ಅದರ ಪರಿಣಾಮಗಳ ಕುರಿತಾಗಿ ಅರಿವಿರಬೇಕು. ಬಾಲಕಾರ್ಮಿಕ ಪದ್ಧತಿಯ ಕುರಿತು ಜಾಗೃತಿ ಮೂಡಿಸಬೇಕು. ಬಡತನದ ನೆಪ ಹೇಳಿ ಮಕ್ಕಳನ್ನು ದುಡಿಯಲು ಕಳುಹಿಸಬೇಡಿ. ಅವರಿಗೆ ಉತ್ತಮ ಶಿಕ್ಷಣ ನೀಡಿ. ಇದರಿಂದ ಮುಂದಿನ ದಿನಗಳಲ್ಲಿ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷೆ ಸುಮಿತ್ರಾ ಮಾತನಾಡಿ, ಸಮಾಜದಲ್ಲಿ ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿ ರದ್ದುಗೊಳಿಸಬೇಕೆಂದರೆ ಸಾರ್ವಜನಿಕರು ಪ್ರಶ್ನಿಸುವುದನ್ನು ಕಲಿಯಬೇಕು. ಮಕ್ಕಳು ತಮ್ಮ ರಕ್ಷಣೆಗೆ ಇರುವ ಸಹಾಯವಾಣಿಗಳಾದ 1098 ಅಥವಾ 112 ಕರೆ ಮಾಡಬಹುದು. ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ ಈ ಸಹಾಯವಾಣಿಗಳಿಗೆ ಕರೆ ಮಾಡಿ ತಿಳಿಸಬೇಕು ಎಂದು ಕರೆ ನೀಡಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ, ನಗರಸಭೆ ಪೌರಾಯುಕ್ತೆ ಪಂಪಶ್ರೀ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಸ್.ರಶ್ಮಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಎಚ್.ಟಿ.ಪ್ರಭಾಕರ್ ಇತರರಿದ್ದರು.

ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಚಿತ್ರಕಲೆ ಸ್ಪರ್ಧೆಯಲ್ಲಿ ಸೇಂಟ್ ಜೋಸೆಫರ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಲಕ್ಷ್ಮೀ(ಪ್ರ), ಕರ್ನಾಟಕ ಪಬ್ಲಿಕ್ ಶಾಲೆಯ ಶಶಾಂಕ್(ದ್ವಿ), ಕಾರ್ಮೆಲ್ ಪ್ರೌಢಶಾಲೆಯ ಎಂ.ಎಸ್.ಮೋಕ್ಷಾ(ತೃ), ಪ್ರಬಂಧ ಸ್ಪರ್ಧೆಯಲ್ಲಿ ಯಲಿಯೂರಿನ ಆಂಜನೇಯ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ.ಭೂಮಿಕಾ(ಪ್ರ), ಸೇಂಟ್ ಜೋಸೆಫರ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್.ಶರ್ಮಿಳಾ(ದ್ವಿ), ರೋಟರಿ ಪ್ರೌಢಶಾಲೆಯ ಎಂ.ದೀಕ್ಷಿತ್(ತೃ) ಸ್ಥಾನ ಪಡೆದುಕೊಂಡರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವರಾಮೇಗೌಡ ಅವರು ವಿಶ್ವ ಬಾಲಕಾರ್ಮಿಕ ವಿರೋಧಿ ದಿನ-2025 ರ ಪ್ರಮಾಣವಚನ ಬೋಧಿಸಿದರು.

ಜಾಗೃತಿ ಜಾಥಾ: ಜಿಲ್ಲಾಧಿಕಾರಿ ಕಚೇರಿಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದವರೆಗೂ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಜಿ.ಎನ್.ಸುಬ್ರಹ್ಮಣ್ಯ ಚಾಲನೆ ನೀಡಿದರು. ಬಳಿಕ ಮಾತನಾಡಿ, ಅನಕ್ಷರಸ್ಥರು ಹಾಗೂ ಬಡತನದಲ್ಲಿರುವವರು 14 ವರ್ಷದೊಳಗಿನ ಮಕ್ಕಳನ್ನು ದುಡಿಯಲು ಹೆಚ್ಚಾಗಿ ಕಳುಹಿಸುತ್ತಾರೆ. ಅಂತಹ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಿ ಅವರನ್ನು ಉತ್ತಮವಾಗಿ ಸ್ವಾತಂತ್ರ್ಯ ಜೀವನ ನಡೆಸಲು ಸಹಕಾರಿಯಾಗಲು ದೇಶದಲ್ಲಿ ಅನೇಕ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಬಾಲಕಾರ್ಮಿಕರನ್ನು ರಕ್ಷಿಸಲು ಅನೇಕ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.