ವಿಜಯವಾಣಿ ಸುದ್ದಿಜಾಲ ಉಡುಪಿ
ಕ್ಯಾನ್ಸರ್ ಕಾಯಿಲೆಯು ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಮಾರಕ ರೋಗವಾಗಿದ್ದು, ಯಾವುದೇ ಪ್ರಕಾರದ ಕ್ಯಾನ್ಸರ್ ಆಗಿದ್ದರೂ ಸಹ ಆರಂಭಿಕ ಹಂತದಲ್ಲಿಯೇ ಗುರುತಿಸಿ, ಸೂಕ್ತ ಚಿಕಿತ್ಸೆ ಪಡೆದರೆ ಪ್ರಾಣಾಪಾಯದಿಂದ ಪಾರಾಗಬಹುದು. ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು ಕೇವಲ ನಾಮಕಾವಾಸ್ತೆ ಆಗಿರದೆ ಅದನ್ನು ಪರಿಣಾಮಕಾರಿಯಾಗಿ ಜನತೆಗೆ ತಲುಪಿಸುವಲ್ಲಿ ಆಶಾಕಾರ್ಯಕರ್ತೆಯರೂ ಶ್ರಮಿಸಬೇಕು ಎಂದು ಪ್ರಭಾರ ಡಿಎಚ್ಒ ಡಾ. ನಾಗರತ್ನಾ ಕರೆ ನೀಡಿದರು.
ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಅಪ್ಪು ಅಭಿಮಾನಿಗಳ ಬಳಗ ಸೇರಿದಂತೆ ವಿವಿಧ ಸಂಘ-ಸಂಸ್ಥೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಚ್.ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆದು ಗುಣಮುಖದಾರವರಿಗೆ ಆಹಾರದ ಕಿಟ್ ಹಾಗೂ ನಗದು ವಿತರಿಸಲಾಯಿತು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸತೀಶ್ ಸ್ವಾಗತಿಸಿದರು. ಕ್ಷಯರೋಗ ಘಟಕದ ಹಿರಿಯ ಆರೋಗ್ಯ ಮೇಲ್ವಿಚಾರಕ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಜಿಲ್ಲಾಸ್ಪತ್ರೆಯ ಹಿರಿಯ ಕ್ಯಾನ್ಸರ್ ತಜ್ಞ ಡಾ. ವೆಂಕಟೇಶ್ ಕಾಯಿಲೆ ಬರುವ ರೀತಿ ಹಾಗೂ ನಿಯಂತ್ರಣ ಕುರಿತು ಉಪನ್ಯಾಸ ನೀಡಿದರು. ಸ್ತ್ರೀ ರೋಗ ಪ್ರಸೂತಿ ತಜ್ಞ ಡಾ. ಶಶಾಂಕ್ ಕಿಣಿ, ಮಹಿಳೆಯರಲ್ಲಿ ಕಂಡುಬರುವ ಗರ್ಭಕೋಶದ ಬಾಯಿಯ ಕ್ಯಾನ್ಸರ್ ಪತ್ತೆ ಹಚ್ಚುವ ಕುರಿತು ಹಾಗೂ ಲಭ್ಯವಿರುವ ಚಿಕಿತ್ಸಾ ವಿಧಾನಗಳ ಮಾಹಿತಿ ನೀಡಿದರು. ಪುಷ್ಪಲತಾ ಅವರು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಮೂಲಕ ಲಭ್ಯವಿರುವ ಚಿಕಿತ್ಸೆಯ ಮಾಹಿತಿ ನೀಡಿದರು.
ಸಭಾ ಕಾರ್ಯಕ್ರಮದ ಬಳಿಕ ಆಸ್ಪತ್ರೆಯ ಆವರಣದಿಂದ ಕ್ಯಾನ್ಸರ್ ಜಾಗೃತಿ ಮತ್ತು ಮಾಹಿತಿ ಕುರಿತ ಜಾಥಾ ನಡೆಯಿತು. ಬ್ರಹ್ಮಗಿರಿಯವರೆಗೆ ಮೆರವಣಿಗೆ ಸಾಗಿತು. ಆಶಾ ಕಾರ್ಯಕರ್ತೆಯರು, ಕಾಲೇಜು ವಿದ್ಯಾರ್ಥಿಗಳು ಕರಪತ್ರ ಹಿಡಿದು, ಘೋಷಣೆ ಕೂಗುತ್ತ ಸಾರ್ವಜನಿಕರಿಗೆ ಅರಿವು ಮೂಡಿಸಿದರು.