ಜಿಲ್ಲೆ

ತಾಯಿ ಸ್ತನ್ಯಪಾನ ಅಮೃತಕ್ಕೆ ಸಮಾನ

Davangere - Desk - Ganesh M K

ಮಲೇಬೆನ್ನೂರು: ಸಮೀಪದ ಎಕ್ಕೆಗೊಂದಿ ಗ್ರಾಮದ ಅಂಗನವಾಡಿ ’ಎ’ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಟಿಎಚ್‌ಒ ಡಾ. ಚಂದ್ರಮೋಹನ್ ಮಾತನಾಡಿ, ತಾಯಿಯ ಹಾಲು ಅಮೃತಕ್ಕೆ ಸಮಾನವಾಗಿದ್ದು, ಈ ಹಾಲು ಬೇರೆ ಯಾವ ಕೈಗಾರಿಕೆಯಲ್ಲೂ ಉತ್ಪಾದಿಸಲು ಸಾಧ್ಯವಿಲ್ಲ. ಇದು ನೈಸರ್ಗಿಕವಾಗಿ ದೇವರು ಸೃಷ್ಟಿಸಿದ ವರ. ಆದ್ದರಿಂದ ಮಗು ಜನಿಸಿದ ಅರ್ಧ ಘಂಟೆಯೊಳಗೆ ತಪ್ಪದೇ ತಾಯಿ ಹಾಲು ಉಣಿಸಬೇಕು ಎಂದು ತಿಳಿಸಿದರು.

ತಾಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸುಧಾ ಮಾತನಾಡಿ, ಗರ್ಭಿಣಿ ಅವಧಿಯಲ್ಲಿ ತಾಯಂದಿರಿಗೆ ತಾಯಿ ಕಾರ್ಡಿನ ಮಹತ್ವ ಮತ್ತು ಲಸಿಕೆಯ ಬಗ್ಗೆ ಮಾಹಿತಿ ತಿಳಿಸಿದರು.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ ಮಾತನಾಡಿ, ವಿಶ್ವ ಸ್ತನ್ಯಪಾನ ಕಾರ್ಯಕ್ರಮವನ್ನು ಆ.1ರಿಂದ 7ರ ವರೆಗೆ ಆಚರಿಸಲಾಗುತ್ತದೆ. ಇದು ಈ ತಿಂಗಳಿಗಷ್ಟೇ ಸೀಮಿತವಾಗಿರದೆ ಸಮತೋಲನ ಆಹಾರ ಮತ್ತು ಪೌಷ್ಠಿಕ ಆಹಾರ ಎಲ್ಲ ಮಕ್ಕಳ ತಾಯಂದಿರು ಮತ್ತು ಗರ್ಭಿಣಿಯರು ತೆಗೆದುಕೊಳ್ಳಬೇಕು ಎಂದರು.

ಭಾನುವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ ಮಾತನಾಡಿ, ಮಕ್ಕಳಿಗೆ ತಾಯಿಯ ಹಾಲು ಕುಡಿಸುವುದರಿಂದ ಮೆದುಳು ಚುರುಕಾಗುತ್ತದೆೆ ಎಂದರು.

ಆರೋಗ್ಯ ಇಲಾಖೆಯ ನಂದಿನಿ, ಉಷಾ ಮತ್ತು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.