ಜಿಲ್ಲೆ

ಎಪಿಎಸ್​ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಬ್ರೈಲ್​ ದಿನ ಆಚರಣೆ; ಸಂಗೀತ ನಿರ್ದೇಶಕ ವಾಸುಕಿ ವೈಭವ್​ ಭಾಗಿ

ಬೆಂಗಳೂರು: ಎನ್​.ಆರ್​. ಕಾಲನಿಯ ಎಪಿಎಸ್​ ಶಿಕ್ಷಣ ಸಂಸ್ಥೆಯ ನರ್ಮದಾ ವಿಭಿನ್ನಚೇತನರ ಸಾಮರ್ಥ್ಯ ಘಟಕದ ವತಿಯಿಂದ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಬ್ರೈಲ್​ ದಿನ ಮತ್ತು ನರ್ಮದಾ ದಿನಾಚರಣೆ ಆಚರಿಸಲಾಯಿತು.

ದೃಷ್ಟಿ ವಿಶೇಷ ಚೇತನ ವಿದ್ಯಾರ್ಥಿಗಳು ವಿವಿಧ ಹಾಡುಗಳನ್ನು ಹಾಡುತ್ತಾ, ಪ್ರತಿಭೆ ಪ್ರದರ್ಶಿಸಿದರು. ಬಳಿಕ ನರ್ಮದಾ ವಿಭಿನ್ನಚೇತನರ ಸಾಮರ್ಥ್ಯ ಘಟಕ ಆಯೋಜಿಸಿದ್ದ ಗಾಯನ, ಕ್ರೀಡೆ, ನೃತ್ಯ ಸೇರಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ದೃಷ್ಟಿ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಂಗೀತ ನಿರ್ದೇಶಕ ವಾಸುಕಿ ವೈಭವ್​ ಮಾತನಾಡಿ, ದೇವರು ಅವಕಾಶವೊಂದನ್ನು ಕಿತ್ತುಕೊಂಡರೆ, ಇನ್ನೊಂದು ಅವಕಾಶವನ್ನು ನೀಡೇ ನೀಡುತ್ತಾನೆ. ಹೀಗಿರುವಾಗ ಪ್ರತಿಯೊಬ್ಬರೂ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವ ಬಗ್ಗೆ ಗಮನ ನೀಡಿ. ನಮ್ಮಲ್ಲಿ ಸಹಾಯ ಮಾಡುವ ಗುಣ ಇದ್ದರೆ, ಭವಿಷ್ಯ ಉತ್ತಮವಾಗಿರುತ್ತದೆ. ವಿಭಿನ್ನಚೇತನರ ಸಾಧನೆ ಸಮಾಜಕ್ಕೆ ಸ್ಫೂರ್ತಿ ನೀಡುತ್ತದೆ. ಕಾಲೇಜಿನಲ್ಲಿದ್ದಾಗ ನಾನು ಕೂಡ ವಿಶೇಷ ಚೇತನರ ಪರವಾಗಿ ಪರೀಕ್ಷೆ ಬರೆಯುತ್ತಿದ್ದೆ ಎಂದು ಹೇಳಿದರು.

ಸಮರ್ಥನಂ ಟ್ರಸ್ಟ್​ನ ಸಂಸ್ಥಾಪಕ ಡಾ. ಮಹಾಂತೇಶ್​ ಜಿ. ಕಿವಡಸನ್ನವರ್​ ಮಾತನಾಡಿ, ದೃಷ್ಟಿದೋಷವಿದೆ ಎಂದು ಯಾರೂ ಕುಗ್ಗಬೇಡಿ. ಶಿಕ್ಷಣ, ತಂತ್ರಜ್ಞಾನ ಹಾಗೂ ಸಮಾಜದ ಬೆಂಬಲ ನಿಮ್ಮೊಂದಿಗಿದೆ. ದೃಢ ಸಂಕಲ್ಪದೊಂದಿಗೆ ಮುಂದುವರಿದರೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಭೆಗೆ ಅಂಗವಿಕಲತೆ ಅಡ್ಡ ಬರುವುದಿಲ್ಲ ಎಂದು ತಿಳಿಸಿದರು.

ಉಚಿತ ಆರೋಗ್ಯ ತಪಾಸಣೆ
ನ್ಯಾಷನಲ್​ ಇಂಟಿಗ್ರೇಟೆಡ್​ ಮೆಡಿಕಲ್​ ಅಸೋಸಿಯೇಷನ್​ನಿಂದ ಎಪಿಎಸ್​ ಶಿಕ್ಷಣ ಸಂಸ್ಥೆಯ ಅಂಧ ವಿದ್ಯಾರ್ಥಿಗಳಿಗೆ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣೆ ನಡೆಯಿತು. ಬಳಿಕ ಹೆಣ್ಣು ಮಕ್ಕಳ ಆರೋಗ್ಯ ಹಾಗೂ ನೈರ್ಮಲ್ಯ ಕುರಿತು ವೈದ್ಯರು ಸಮಾಲೋಚನೆ ನಡೆಸಿ ಸಲಹೆ ನೀಡಿದರು.

ದೇವರು ವಿಭಿನ್ನಚೇತನರಿಂದ ದೃಷ್ಟಿಯನ್ನು ಕಿತ್ತುಕೊಂಡಿದ್ದರೂ, ಉತ್ಸಾಹ ಹಾಗೂ ಪ್ರತಿಭೆಯನ್ನು ನೀಡಿದ್ದಾರೆ. ದೇವರ ಈ ನಿರ್ಧಾರವನ್ನು ಪರೀಕ್ಷೆ ಎಂದುಕೊಳ್ಳಿ. ಕಷ್ಟ ಪಟ್ಟರೆ ಫಲ ಇದ್ದೇ ಇದೆ. ಎಲ್ಲರೂ ದೇವರು ನೀಡಿದ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಿ. ಸಾಧಿಸಬೇಕೆಂದು ನಿರ್ಧರಿಸಿದರೆ, ಹಲವು ಅವಕಾಶಗಳು ನಮ್ಮ ಮುಂದಿವೆ.
-ಸಿಎ ಡಾ. ವಿಷ್ಣು ಭರತ್​ ಆಲಂಪಳ್ಳಿ, ಅಧ್ಯಕ್ಷ, ಎಪಿಎಸ್​ ಶಿಕ್ಷಣ ಸಂಸ್ಥೆ

ಎನ್​ಐಎಂಎ ಉಪಾಧ್ಯೆ ಡಾ. ರಾಧಿಕಾ ಎ. ಕಾಟವಾಟೆ, ಶೇಖರ್​ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞೆ ಡಾ. ರಾಧಿಕಾ ತೋರ್ಗಲ್​, ನರ್ಮದಾ ವಿಭಿನ್ನಚೇತನರ ಸಾಮರ್ಥ್ಯ ಘಟಕದ ಸಂಯೋಜಕಿ ಎಸ್​. ಹೇಮಾವತಿ ಮತ್ತಿತರರಿದ್ದರು.