ಜಿಲ್ಲೆ

ಹಣದಿಂದ ರಕ್ತ ಸೃಷ್ಟಿಸಲು ಸಾಧ್ಯವಿಲ್ಲ: ಜಿಲ್ಲಾ ಗವರ್ನರ್ ಮಾದೇಗೌಡ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಒಂದು ಯೂನಿಟ್ ರಕ್ತದಿಂದ ನಾಲ್ವರ ಜೀವ ಉಳಿಸಬಹುದು ಎಂದು ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಜಿಲ್ಲಾ ಗವರ್ನರ್ ಮಾದೇಗೌಡ ಅಭಿಪ್ರಾಯಪಟ್ಟರು.

ನಗರದ ಮಿಮ್ಸ್ ರಕ್ತನಿಧಿ ಕೇಂದ್ರದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆಯಿಂದ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಆಯೋಜಿಸಿದ್ದ ನಿರಂತರ ರಕ್ತದಾನಿಗಳಿಗೆ ಅಭಿನಂದನೆ, ಸ್ವಯಂ ಪ್ರೇರಿತ ರಕ್ತದಾನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಯಂ ಪ್ರೇರಿತ ದಾನಿಯಿಂದ ಮಾತ್ರ ರಕ್ತ ಪಡೆಯಲು ಸಾಧ್ಯ. ಜೀವದಾನ ಮಾಡುವ ಏಕೈಕ ಜೀವದ್ರವ್ಯ ರಕ್ತ. ಹಣದಿಂದ ಅಗತ್ಯರಕ್ತ ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದರು.

ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ನಿರಂತರ ರಕ್ತದಾನ ಮಾಡುವವರನ್ನು ವಿಶ್ವಮಾನವರು ಎಂದರೂ ತಪ್ಪಾಗದು. ನಾಲ್ವರ ಜೀವ ಉಳಿಸುವ ಸುಕಾರ್ಯದಲ್ಲಿ ಮಾನವೀಯತೆ ಮೆರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರಕ್ತದಾನಿಗಳು ಸೃಷ್ಟಿಯಾಗಬೇಕಿದೆ. ಇಂತಹ ರಕ್ತದಾನ ಅಭಿಯಾನದಿಂದ ಮಾತ್ರ ಹೆಚ್ಚು ರಕ್ತ ಸಂಗ್ರಹಿಸಲು ಸಾಧ್ಯ. ನಿರಂತರ ರಕ್ತದಾನ ಮಾಡುವವರೇ ನಿಜವಾದ ಧೈವಿಶಕ್ತರು, ವಿಶ್ವಮಾನವರು ಎಂದು ಬಣ್ಣಿಸಿದರು.

ರಕ್ತ ನೀಡಿ, ಭರವಸೆ ನೀಡಿ ಒಟ್ಟಾಗಿ ನಾವು ಜೀವಗಳನ್ನು ಉಳಿಸುತ್ತೇವೆ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ರಕ್ತದಾನಿಗಳ ದಿನವು ಏಕತೆಯ ಶಕ್ತಿ ಮತ್ತು ನಿಯಮಿತ ದಾನದ ಅಗತ್ಯವನ್ನು ಎತ್ತಿ ತೋರಿಸುತ್ತಿದೆ. ಆಧುನಿಕ ರಕ್ತ ವರ್ಗಾವಣೆ ಪದ್ಧತಿಗಳಿಗೆ ಅಡಿಪಾಯ ಹಾಕಿ ರಕ್ತ ಗುಂಪು ವ್ಯವಸ್ಥೆಯನ್ನು ಕಂಡುಹಿಡಿದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಕಾರ್ಲ್ ಲ್ಯಾಂಡ್‌ಸ್ಟೈನರ್ ಅವರ ಜನ್ಮದಿನದಂದು ವಿಶ್ವ ರಕ್ತದಾನಿಗಳ ದಿನ ಆಚರಿಸಿ ಸ್ಮರಿಸಲಾಗುತ್ತಿದೆ. ಭಾರತದಲ್ಲಿ ಸೆಪ್ಟಂಬರ್ ತಿಂಗಳಲ್ಲಿ ರಾಷ್ಟ್ರೀಯ ರಕ್ತದಾನ ದಿನವನ್ನು ಆಚರಿಸಲಾಗುತ್ತಿದೆ ಎಂದು ನುಡಿದರು.

ಜಾಗತಿಕ ಮಟ್ಟದಲ್ಲಿ ಶೇ.2ರಷ್ಟು ಜನರು ಮಾತ್ರ ಸ್ವಯಂ ರಕ್ತದಾನಿಗಳಿದ್ದಾರೆ. ದಿನದಿಂದ ದಿನಕ್ಕೆ ರಕ್ತಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದರೆ, ಪೂರೈಕೆ ಕಡಿಮೆಯಾಗುತ್ತಿದೆ. ಸಕಾಲಕ್ಕೆ ರಕ್ತ ಸಿಗದೆ ಸಾಕಷ್ಟು ಜನರು ಪ್ರಾಣಾಪಾಯದಲ್ಲಿದ್ದಾರೆ. ರಕ್ತದಾನ ಮಾಡುವುದರಿಂದ ಬಿಪಿ, ಷುಗರ್, ಹೃದಯ ಸಂಬಂಧಿ ತೊಂದರೆಗಳು ಮತ್ತು ಕ್ಯಾನ್ಸರ್‌ನಂತಹ ಅಪಾಯಕಾರಿ ರೋಗಗಳಿಂದ ಪಾರಾಗಬಹುದು. ರಕ್ತದಾನಿಗಳು ದೀರ್ಘಾಯುಸ್ಸಿಗಳಾಗಿಯೂ ಬದುಕುತ್ತಾರೆ ಎನ್ನುವು ಸಂಶೋಧನಾ ವಿಚಾರ ಬೆಳಕಿಗೆ ಬಂದಿದೆ ಎಂದರು.

ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಆರ್‌ಎಂಒ ಡಾ.ದರ್ಶನ್, ಅಲಯನ್ಸ್ ಸಂಸ್ಥೆಯ ಸಂಪುಟ ಕಾರ್ಯದರ್ಶಿ ನಾಗರಾಜು, ಖಜಾಂಚಿ ಮಹೇಶ್, ರಕ್ಷಿತ್‌ರಾಜ್, ಪ್ರೊ.ಡೇವಿಡ್, ಅಂಗವಿಕಲರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕೋಮಲ್‌ಕುಮಾರ್, ಡಾ.ಶಿವಕುಮಾರ್, ಲಂಕೇಶ್, ಕುಮಾರ್ ಇತರರಿದ್ದರು.

ಇದೇ ಸಂದರ್ಭದಲ್ಲಿ 60ಕ್ಕೂ ಹೆಚ್ಚು ಬಾರಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿರುವ ಎಚ್.ಸಿ.ಅನಿಲ್‌ಕುಮಾರ್, ಟಿ.ಎನ್.ರಕ್ಷಿತ್‌ರಾಜ್, ಸಂತೆಕಸಲಗೆರೆ ಬಸವರಾಜು, ಕೆ.ಎನ್.ಮನು, ಶಿವಮಲ್ಲು, ಅವಿನಾಶ್, ರಮ್ಯಾ, ಬಂದೇಶ್, ವೆಂಕಟೇಶ್ ಅವರನ್ನು ಗಣ್ಯರು ಅಭಿನಂದಿಸಿದರು. ಬಳಿಕ ಅಭಿಯಾನದಲ್ಲಿ ಹಲವು ಜನರು ರಕ್ತದಾನ ಮಾಡಿದರು.