ಜಿಲ್ಲೆ

ಅಂಗಾಂಗ ದಾನ ಮಾನವೀಯ ಕಾರ್ಯ...

ಜಯಕರ ಶೆಟ್ಟಿ ಎಸ್​. ಅಭಿಪ್ರಾಯ

ರೆಡ್​ಕ್ರಾಸ್​ನಿಂದ ರಕ್ತದಾನಿಗಳಿಗೆ ಸನ್ಮಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ನಾವೆಲ್ಲ ಜನ್ಮದಿಂದಲೇ ದೇಹವಂತರಾಗಿದ್ದೇವೆ. ದೇಹವೆಂದರೆ ವಿವಿಧ ಅಂಗಾಂಗಗಳು. ಯಾವುದೇ ಅಂಗ ಸರಿ ಇಲ್ಲದಿದ್ದರೂ ಜೀವನಕ್ಕೆ ತೊಂದರೆ. ಹೀಗಾಗಿ ಅಂಗಾಂಗ ದಾನವೂ ಸಹ ಮಾನವೀಯ ಕಾರ್ಯವಾಗಿದೆ. ಇದರೊಂದಿಗೆ ರಕ್ತದಾನವೂ ಶ್ರೇಷ್ಠವಾಗಿದೆ ಎಂದು ಕುಂದಾಪುರ ರೆಡ್​ ಕ್ರಾಸ್​ನ ಸಭಾಪತಿ ಜಯಕರ ಶೆಟ್ಟಿ ಎಸ್​. ಅಭಿಪ್ರಾಯಪಟ್ಟರು.

ಉಡುಪಿ ಬ್ರಹ್ಮಗಿರಿಯಲ್ಲಿರುವ ಭಾರತೀಯ ರೆಡ್​ ಕ್ರಾಸ್​ ಸಂಸ್ಥೆಯ ಉಡುಪಿ ಜಿಲ್ಲಾ ಶಾಖೆಯಲ್ಲಿ ರಕ್ತನಿಧಿ ಕೇಂದ್ರ ಕುಂದಾಪುರ, ಡಿಸ್ಟ್ರಿಕ್ಟ್​ ಕೆಮಿಸ್ಟ್​-ಡ್ರಗ್ಗಿಸ್ಟ್​ ಅಸೋಸಿಯೇಷನ್​ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್​ ಟ್ರಸ್ಟ್​ ಹಾಗೂ ಪ್ರಸಾದ ನೇತ್ರಾಲಯ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ಇವರ ಸಹಭಾಗಿತ್ವದಲ್ಲಿ ಜೂನ್​ 15ರಂದು ಆಯೋಜಿಸಿದ್ದ ರಕ್ತದಾನ-ನೇತ್ರ ತಪಾಸಣಾ ಶಿಬಿರ ಮತ್ತು ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮತಾನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರೆಡ್​ ಕ್ರಾಸ್​ನ ಸಭಾಪತಿ ಡಾ. ಅಶೋಕ ವೈ.ಜಿ. ಮಾತನಾಡಿ, ರಕ್ತದಾನ ಮತ್ತು ನೇತ್ರದಾನದ ಮಹತ್ವ ವಿವರಿಸಿದರು. ಜಿಲ್ಲಾ ರೆಡ್​ ಕ್ರಾಸ್​ನ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಪ್ರಾಸ್ತಾವಿಕವಾಗಿ ಮಾತಾನಾಡಿ, ರಕ್ತದಾನ ಮತ್ತು ನೇತ್ರ ತಪಾಸಣೆ ಕುರಿತು ರೆಡ್​ ಕ್ರಾಸ್​ ಹಮ್ಮಿಕೊಳ್ಳುವ ಚಟುವಟಿಕೆ ವಿವರಿಸಿದರು.

ದಾನಿಗಳಿಗೆ ಸನ್ಮಾನ

ಹೆಚ್ಚು ಬಾರಿ ರಕ್ತದಾನ ಮಾಡಿದ ಉಮೇಶ ಪ್ರಭು, ಮಾರ್ಕ್​ ವಿಜಯ ಡಿ'ಸೋಜಾ, ಸುಧಾಕರ ನಾಯಕ ಎ., ರಮೇಶ ಎಸ್​. ತಿಂಗಳಾಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಉಡುಪಿ ಜಿಲ್ಲಾ ಕೆಮಿಸ್ಟ್​-ಡ್ರಗ್ಗಿಸ್ಟ್​ ಅಸೋಸಿಯೇಷನ್​ನ ಅಧ್ಯಕ್ಷ ಅಮ್ಮುಂಜೆ ರಮೇಶ ನಾಯಕ, ಕಾರ್ಯದರ್ಶಿ ಸುಬ್ರಹ್ಮಣ್ಯ ರಾವ್​, ಜಿಲ್ಲಾ ರೆಡ್​ ಕ್ರಾಸ್​ ಆಡಳಿತ ಮಂಡಳಿ ಸದಸ್ಯರಾದ ವಿ.ಜಿ. ಶೆಟ್ಟಿ, ಚಂದ್ರಶೇಖರ, ಪ್ರಸಾದ ನೇತ್ರಾಲಯದ ವೈದ್ಯಾಧಿಕಾರಿ ಡಾ. ಮೋಹನ ಗೌಡ, ಕುಂದಾಪುರ ರೆಡ್​ ಕ್ರಾಸ್​ನ ಖಜಾಂಚಿ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

ನೇತ್ರ ಜ್ಯೋತಿ ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ರೆಡ್​ ಕ್ರಾಸ್​ ಸದಸ್ಯ ರಾಘವೇಂದ್ರ ಪ್ರಭು ಕರ್ವಾಲ್​ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೆಡ್​ ಕ್ರಾಸ್​ ಖಜಾಂಚಿ ರಮಾದೇವಿ ವಂದಿಸಿದರು.