ಮೈಸೂರು: ನಗರದ ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಂಭಾಗಣದಲ್ಲಿ ಬುಧವಾರ ವಿಶ್ವ ರಕ್ತದಾನಿಗಳ ದಿನ ಆಚರಿಸಲಾಯಿತು.
ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ರಕ್ತ ಕೇಂದ್ರ ವಿಭಾಗ, ಪ್ಯಾಥಾಲಜಿ ವಿಭಾಗ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿ, ಎನ್‌ಎಸ್‌ಎಸ್ ಘಟಕ, ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್ ವತಿಯಿಂದ ಕಾರ್ಯಕ್ರಮ ಆಯೋಜಿಸ ಲಾಗಿತ್ತು.
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಕ್ಕೊಳಗಾದವರಿಗೆ ಮತ್ತು ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತದ ಕೊರತೆ ಹೆಚ್ಚಾಗುತ್ತಲೇ ಇದ್ದು, ಇದನ್ನು ಸರಿದೂಗಿಸಲು ಯುವ ಸಮೂಹ ರಕ್ತದಾನ ಮಾಡುವಂತೆ ಕರೆ ನಿಡಿದರು. ಅಲ್ಲದೆ, ಈ ಸಂದರ್ಭ ಜಿಲ್ಲಾಧಿಕಾರಿ ರಕ್ತದಾನ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ. ಬೆಟಸೂರಮಠ ಮಾತನಾಡಿ, ನಿರಂತರವಾಗಿ ರಕ್ತದಾನ ಮಾಡುವುದರಿಂದ ದಾನಿಗಳಿಗೆ ಆಗುವ ಆರೋಗ್ಯದ ಲಾಭಗಳ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಹೆಚ್ಚುಬಾರಿ ರಕ್ತದಾನ ಮಾಡಿರುವ ಡಾ.ಅನುಪಮಾ ಸುಂದರ್ ಮತ್ತು ಡಾ.ಯುವರಾಜ್‌ನಾಥ್ ಹಾಗೂ ಕೆ. ನವೀನ್ ಅವರನ್ನು ಸನ್ಮಾನಿಸಲಾಯಿತು. ಒಟ್ಟು 90 ಜನರು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಉಪನಿರ್ದೇಶಕ ಡಾ. ಮಂಜುನಾಥ್, ಆಡಳಿತಾಧಿಕಾರಿ ಲೋಕೇಶ್, ಪ್ಯಾಥಾಲಜಿ ವಿಭಾಗದ ಮುಖ್ಯಸ್ಥೆ ಡಾ.ಸಿ.ಎಸ್. ಶೀಲಾದೇವಿ, ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲರಾದ ಎಂ.ಕೆ. ಅಶ್ವಥಿದೇವಿ, ಜೆಎಸ್‌ಎಸ್ ಆಸ್ಪತ್ರೆಯ ರಕ್ತಕೇಂದ್ರ ಅಧಿಕಾರಿ ಡಾ.ಪಿ. ಪಲ್ಲವಿ ಇದ್ದರು.