ದಾವಣಗೆರೆ: ಭಾರತ ಸೇರಿ ವಿಶ್ವದಾದ್ಯಂತ ಬೇಡಿಕೆಗೆ ತಕ್ಕಂತೆ ರಕ್ತದ ಪೂರೈಕೆ ಆಗುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಹೇಳಿದರು.
ಚಿಗಟೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಬುಧವಾರ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಲಯನ್ಸ್ ನಿಧಿ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಬದುಕುವ ಎಲ್ಲ ಅವಕಾಶಗಳಿದ್ದರೂ ಎಷ್ಟೋ ಜನರು ರಕ್ತದ ಕೊರತೆಯಿಂದಾಗಿ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳ ಸರ್ಕಾರಗಳು, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ರಕ್ತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿವೆ.
ಕ್ಯಾನ್ಸರ್, ಹೃದಯ ಸಂಬಂಧಿ ಸಮಸ್ಯೆ, ಅಪಘಾತ, ಹೆರಿಗೆ ಚಿಕಿತ್ಸೆ ವೇಳೆ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಅವಶ್ಯಕತೆ ಇರುತ್ತದೆ.
ಜಗತ್ತಿನ ಜನಸಂಖ್ಯೆಯ ಪೈಕಿ ಶೇ. 32ರಷ್ಟು ಜನರು ಮಾತ್ರ ರಕ್ತದಾನ ಮಾಡಲು ಅರ್ಹರಿದ್ದಾರೆ ಎಂದು ತಿಳಿಸಿದರು.
ರಕ್ತದಾನ ನಿಸ್ವಾರ್ಥ ಸೇವೆಯಾಗಬೇಕು. ಅವಶ್ಯಕತೆ ಇದ್ದವರಿಗೆ ಕೂಡಲೇ ರಕ್ತ ದೊರೆಯಬೇಕು.
ರಕ್ತದಾನದ ಬಗ್ಗೆ ಇರುವ ತಪ್ಪು ತಿಳಿವಳಿಕೆ ಹೋಗಲಾಡಿಸಿ ಆರೋಗ್ಯವಂತ ಪುರುಷ ಹಾಗೂ ಮಹಿಳೆಯರಿಗೆ ನಿಯಮಿತವಾಗಿ ರಕ್ತದಾನ ಮಾಡುವಂತೆ ಪ್ರೇರಣೆ ನೀಡಬೇಕಿದೆ ಎಂದರು.
ಪ್ರತಿ ವರ್ಷ ಜೂನ್ 14ರಂದು ರಕ್ತದಾನಿಗಳ ದಿನ ಆಚರಿಸಲಾಗುತ್ತದೆ. ಅಗತ್ಯ ಇರುವವರಿಗೆ ರಕ್ತ ಲಭಿಸಲು ಈ ಕಾರ್ಯಕ್ರಮ ನೆರವಾಗಲಿದೆ.
ರಕ್ತದಾನಿಗಳಿಂದ ಕೋಟ್ಯಂತರ ಜನರು ತಮ್ಮ ಪ್ರಾಣ ಉಳಿಸಿಕೊಳ್ಳುವಂತಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎ. ನಾಗರಾಜ್ ಮಾತನಾಡಿ, ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವಂತಾಗಲಿ ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಆಯೋಜಿಸುತ್ತೇವೆ.
ವಿಜ್ಞಾನ ಎಷ್ಟೇ ಮುಂದುವರಿದರೂ ಕೃತಕವಾಗಿ ಮಾನವನ ರಕ್ತವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮನುಷ್ಯನೇ ರಕ್ತದಾನ ಮಾಡಿ, ಮತ್ತೊಬ್ಬನ ಪ್ರಾಣ ಉಳಿಸಬೇಕು ಎಂದರು.
ರಕ್ತ ಕೊಡುವುದರಿಂದ ಮನುಷ್ಯನ ಆರೋಗ್ಯ ವೃದ್ಧಿಸಲಿದೆ. 18ರಿಂದ 60 ವರ್ಷ ವಯಸ್ಸಿನ ಎಲ್ಲರೂ ರಕ್ತದಾನ ಮಾಡಬಹುದಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕರ್ನಾಟಕ ಭಾಗದಲ್ಲಿ ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುತ್ತಾರೆ. ಈ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆಯಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಆಯ್ದ ಕೆಲವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ. ಮುರಳೀಧರ್, ಡಾ. ನಟರಾಜ್, ಡಾ. ಗಂಗಾಧರ್, ಡಾ.ಮೀನಾಕ್ಷಿ, ಡಾ.ಎಸ್.ಪಿ. ಮಧು, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಇದ್ದರು.