ಹುಬ್ಬಳ್ಳಿ: ಸಂಧಿವಾತ ಎಂದರೆ ಶಾಶ್ವತ ನೋವು ಅಥವಾ ಅಸಹಾಯಕ ಬದುಕು ಎಂದು ಕೊರಗುವುದು ಬೇಕಿಲ್ಲ, ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಈ ಕಾಯಿಲೆ ಉಳ್ಳವರೂ ಕೂಡ ಸಾಮಾನ್ಯ ಜೀವನ ನಡೆಸಬಹುದು ಎಂದು ಸಂಧಿವಾತ ತಜ್ಞ, ಶಸ್ತ್ರಚಿಕಿತ್ಸಕ ಡಾ. ವೀರೇಂದ್ರ ಭಸ್ಮೆ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಅ. 12ರಂದು ನಗರದ ವಿವೇಕಾನಂದ ಜನರಲ್ ಆಸ್ಪತ್ರೆಯಲ್ಲಿ ಸಂಧಿವಾತ ದಿನವನ್ನು ಆಚರಿಸಲಾಗುತ್ತಿದೆ. "ಇದು ನಿಮ್ಮ ಕೈಯಲ್ಲೇ ಇದೆ, ಕ್ರಮ ಕೈಗೊಳ್ಳಿ' ಎಂಬ ಧ್ಯೇಯ ವಾಕ್ಯದೊಂದಿಗೆ ಈ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಸಂಧಿವಾತ ಇದರ ನಿರ್ವಹಣೆಯ ಜವಾಬ್ದಾರಿ ಕೇವಲ ವೈದ್ಯರದಷ್ಟೇ ಅಲ್ಲ, ರೋಗಿಗಳ ಹಾಗೂ ಅವರ ಕುಟುಂಬ ಮತ್ತು ಸಮುದಾಯ ಮೇಲೂ ಇದೆ. ಹಾಗಾಗಿ ಕಾಯಿಲೆ ಇರುವವರಿಗೆ ಸರಿಯಾಗಿ ತಿಳಿವಳಿಕೆ ನೀಡಿ ಅದರಿಂದ ಮುಕ್ತಿ ಕೊಡುವ ಕೆಲಸ ಆಗಬೇಕು ಎಂದರು.
101 ವರ್ಷದ ವೃದ್ಧರೊಬ್ಬರಿಗೆ ತೀವ್ರ ಮೊಣಕಾಲು ನೋವು ಇತ್ತು. ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈ ವಿಷಯ ತಿಳಿದ ಇನ್ನೊಬ್ಬ 68 ವರ್ಷದ ವೃದ್ಧೆಯೂ ಆಸ್ಟಿಯೋ ಆರ್ಥರಿಟಿಸ್ ನಿಂದಾಗಿ ಓಡಾಡಲು ಆಗದ ಪರಿಸ್ಥಿತಿಯಲ್ಲಿದ್ದರು. ಆಗ ವಿವೇಕಾನಂದ ಜನರಲ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಹಿನ್ನೆಲೆಯಲ್ಲಿ ಈಗ ಸುಲಭವಾಗಿ ಓಡಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಶಸ್ತ್ರಚಿಕಿತ್ಸೆ ನಂತರ ಮೂರು ತಿಂಗಳ ಕಾಲ ಚಿಕಿತ್ಸೆ ನಡೆದಿದೆ. ರೋಗಿಯು ಹಸಿರು ತರಕಾರಿ, ಕಡಲೆಕಾಯಿ, ದಾಳಿಂಬೆ ಸೇರಿದಂತೆ ಫೈಬರ್ ಅಂಶ ಇರುವ ಆಹಾರ ಸೇವನೆ ಮಾಡಬೇಕು. ನಿತ್ಯ ವ್ಯಾಯಾಮ ಮಾಡುವುದರಿಂದ ಮುಂದೆ ಇಂತಹ ಸಮಸ್ಯೆಗಳು ಬರದಂತೆ ತಡೆಯಬಹುದು ಎಂದು ಮಾಹಿತಿ ನೀಡಿದರು.