ಜಿಲ್ಲೆ

ಮಂಡ್ಯ ಜಿಲ್ಲೆಗೂ ಕಾಲಿಟ್ಟಿದೆ ಡ್ರಗ್ಸ್: ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಆತಂಕ

ಮಂಡ್ಯ: ಭಾರತದಲ್ಲಿ 10 ರಿಂದ 17 ವರ್ಷದೊಳಗಿನ ಸುಮಾರು 1.58 ಕೋಟಿ ಮಕ್ಕಳು ಮಾದಕ ವಸ್ತುಗಳ ಬಳಕೆಯ ವ್ಯಸನಿಗಳಾಗಿದ್ದಾರೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಆತಂಕ ವ್ಯಕ್ತಪಡಿಸಿದರು.

ನಗರದ ಪೊಲೀಸ್ ಕಾಲನಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಕೃಷಿಕ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಾದಕ ವಸ್ತು ಮತ್ತು ಕಳ್ಳಸಾಗಾಣೆ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಸುಮಾರು 16 ಕೋಟಿ ಜನ ಮದ್ಯ ವ್ಯಸನಿಗಳಿದ್ದಾರೆ. ಮೂರು ಬಗೆಯ ಮಾದಕ ವಸ್ತುಗಳು ಲಭ್ಯವಾಗುತ್ತಿದೆ. ಕ್ಯಾನಬಿಸ್, ಅಫೀಮು, ಫಾರ್ಮಾಸ್ಟಿಕ್ ಡ್ರಗ್‌ಗಳನ್ನು ಹೆಚ್ಚು ಬಳಸಲಾಗುತ್ತಿದೆ ಎಂದು ವಿವರಿಸಿದರು.

ಸುಮಾರು 3,10 ಕೋಟಿಯಷ್ಟು ಜನರು ಕ್ಯಾನಬಿಸ್, 2,30 ಕೋಟಿಯಷ್ಟು ಜನರು ಅಫೀಮು, ಹೆರಾಯಿನ್, ಬ್ರೌನ್‌ಷುಗರ್ ಬಳಸುತ್ತಿದ್ದಾರೆ. ಮೈಸೂರು, ಬೆಂಗಳೂರು ಅಂತೇನು ಇಲ್ಲ. ಮಂಡ್ಯ ನಗರದಲ್ಲಿಯೂ ಬಳಸುವವರು ಇದ್ದಾರೆ. ಡ್ರಗ್ಸ್ ಮಂಡ್ಯಕ್ಕೂ ಕಾಲಿಟ್ಟಿದ್ದು, ಕಾಲೇಜುಗಳ ಬಳಿ ಮಾರಾಟ ಮಾಡಲು ಬರುತ್ತಾರೆ ಎಂದು ಎಚ್ಚರಿಸಿದರು.

ಇತ್ತೀಚಿನ ವರದಿಗಳ ಪ್ರಕಾರ ಮಾದಕ ವಸ್ತು ಮತ್ತು ಮದ್ಯಪಾನ ವ್ಯಸನಕ್ಕೆ ಯುವ ಸಮುದಾಯ ಬಲಿಯಾಗುತ್ತಿದೆ. ಯುವತಿಯರು, ಮಹಿಳೆಯರು ವ್ಯಸನಕ್ಕೆ ಒಳಗಾಗಿ ದುಷ್ಪರಿಣಾಮ ಎದುರಿಸುತ್ತಿದ್ದಾರೆ. ದುಶ್ಚಟ, ವ್ಯಸನಗಳಿಂದ ದೂರ ಇರಲು ಜಾಗೃತಿ ಮೂಡಿಸುವುದಕ್ಕಾಗಿಯೇ ವಿಶ್ವ ಮಾದಕವಸ್ತು ಮತ್ತು ಕಳ್ಳಸಾಗಾಣೆ ವಿರೋಧಿ ದಿನವನ್ನು ಭಾರತ ಸೇರಿದಂತೆ ಎಲ್ಲ ರಾಷ್ಟಗಳು ಆಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ರಾಷ್ಟಗಳು ಒಗ್ಗೂಡಿ ಡ್ರಗ್ಸ್ ಮುಕ್ತ ಪ್ರಪಂಚ ಮಾಡಲು ಮುಂದಾಗಿವೆ. ವ್ಯಸನ ಮುಕ್ತ ಪ್ರಪಂಚ ಮಾಡಲು ಸಾಕಷ್ಟು ಪಣತೊಡುತ್ತಿವೆ. ಮಾದಕ ವಸ್ತು ಮಾರಾಟ ನಿಯಂತ್ರಣಕ್ಕೆ ಕಠಿಣವಾದ ಕಾನೂನುಗಳು ಇವೆ. ಮರಣದಂಡನೆ ವಿಧಿಸುವ ವಿದೇಶಗಳಲ್ಲಿ ಕಾನೂನುಗಳು ಇವೆ. ಇರಾನ್, ಇರಾಕ್‌ನಲ್ಲಿ ಮಾದಕವಸ್ತು ಮಾರಾಟ ಮಾಡಿದವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಎನ್.ಜಿ.ವೇಣುಗೋಪಾಲ್ ಮಾತನಾಡಿ, ಮನುಷ್ಯನಿಗೆ ಆರೋಗ್ಯವೇ ದೊಡ್ಡ ಆಸ್ತಿ. ವ್ಯಸನ ಮುಕ್ತ ಜೀವನ ಚಂದ, ವ್ಯಸನ ಆವರಿಸಿಕೊಳ್ಳುವುದು ಕುತೂಹಲದಿಂದ. ಒಮ್ಮೆ ನೋಡೋಣ ಎನ್ನುವ ಭಾವನೆಯಿಂದ ಅದು ಜೀವನದಲ್ಲಿ ಹಾಸುಹೊಕ್ಕಾಗುತ್ತದೆ. ಮಾದಕ ವಸ್ತು, ಮದ್ಯಪಾನ, ಧೂಮಪಾನದಿಂದ ಯುವ ಜನತೆ ದೂರವಿರಬೇಕು. ಆರೋಗ್ಯ ರಕ್ಷಿಸಿಕೊಳ್ಳಿ, ಉತ್ತಮ ಭವಿಷ್ಯ ನಿಮ್ಮದಾಗಲಿ. ನೆರೆ ಹೊರೆಯವರ ಆರೋಗ್ಯವು ಸುಧಾರಿಸಲಿ. ವ್ಯಸನಿಗಳು, ಮಾನಸಿಕ ರೋಗಿಗಳು ನಿಮಗೆ ಕಂಡು ಬಂದಲ್ಲಿ ಅವರನ್ನು ಚಿಕಿತ್ಸೆ ಕೊಟ್ಟು ಸರಿಪಡಿಸಬಹುದು. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದರು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ, ಉಪನ್ಯಾಸಕರಾದ ಬಿ.ಲಿಂಗೇಗೌಡ, ಸಬನಾ, ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಕೆ.ಎಸ್.ಷಡಕ್ಷರಿ, ಕೆ.ಎಸ್.ಜವರೇಗೌಡ, ಜಗದೀಶ್ ಇತರರಿದ್ದರು.