ಜಿಲ್ಲೆ

ಜಾಗೃತಿಯಿಂದ ಬದಲಾವಣೆ ಸಾಧ್ಯ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಳಿನಿಕುಮಾರಿ ಅಭಿಮತ

reportermys

ಮಂಡ್ಯ: ಏಡ್ಸ್ ಮಾರಕ ರೋಗ. ಇದು ಹರಡುವುದನ್ನು ತಡೆಯುವುದು ಸಹ ಮುಖ್ಯ. ಅಂತೆಯೇ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿದಾಗ ಬದಲಾವಣೆ ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಳಿನಿಕುಮಾರಿ ಸಲಹೆ ನೀಡಿದರು.

ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಎಂಒಬಿ ಗ್ರಾಮೀಣ ಆರೋಗ್ಯ ಕೇಂದ್ರ, ಭಾರತೀಯ ರೆಡ್‌ಕ್ರಾಸ್, ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ನಗರದ ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ರೀತಿಯಲ್ಲೇ ಪ್ರತಿ ಜೀವಿಗಳಿಗೂ ಜೀವಿಸುವ ಹಕ್ಕು ಇದೆ. ಅದನ್ನು ನಾವು ಕಸಿದುಕೊಳ್ಳುವ ಸ್ವಾತಂತ್ರ್ಯ ನಮಗಿಲ್ಲ. ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಗರ ಮತ್ತು ಜನವಸತಿ ಪ್ರದೇಶಗಳತ್ತ ದಾಳಿ ಮಾಡುತ್ತಿವೆ. ಬೆಳೆ ಮತ್ತು ಜೀವ ಹಾನಿಯನ್ನೂ ಮಾಡುತ್ತಿವೆ. ನಾವು ಅವುಗಳ ಸ್ವಾತಂತ್ರ್ಯವನ್ನು ಕಸಿದುಕೊಂಡಿರುವುದು ಅವು ನಾಡಿನತ್ತ ಬರುತ್ತಿವೆ ಎಂದು ಹೇಳಿದರು.

ಪೂರ್ವಿಕರು ನಮಗೆ ಉತ್ತಮ ಪರಿಸರ, ಪ್ರಕೃತಿಯನ್ನು ಕೊಡುಗೆಯಾಗಿ ನೀಡಿದ್ದರು. ನಾವು ಸಹ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಬಿಟ್ಟು ಕೊಡುವುದು ಅಗತ್ಯ. ಇದೆಲ್ಲವನ್ನೂ ಸಂವಿಧಾನ ನಮಗೆ ಪಾಠ ಹೇಳುತ್ತದೆ. ಯುವಜನತೆ ಆಗಾಗ್ಗೆ ರಕ್ತದಾನ ಮಾಡಬೇಕು. ಇದರಿಂದಾಗಿ ನಮ್ಮ ಆರೋಗ್ಯವೂ ವೃದ್ಧಿಯಾಗುತ್ತದೆ. ಜತೆಗೆ ಯಾವುದೇ ಸೋಂಕುಗಳಿದ್ದರೂ ರಕ್ತ ಪರೀಕ್ಷೆಯಿಂದ ತಿಳಿಯುತ್ತದೆ. ಹಾಗಾಗಿ ಪ್ರತಿಯೊಬ್ಬ ಯುವಜನತೆ ಸಹ ನಿಯಮಿತವಾಗಿ ರಕ್ತದಾನ ಮಾಡುವುದು ಒಳಿತು ಎಂದು ಸಲಹೆ ನೀಡಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಡಿ.ಎಂ.ಮಹೇಶ್, ಸಿಸ್ಟರ್ ಜೋಳಿ, ಶಿವಾನಂದ, ಪ್ರಾಂಶುಪಾಲ ಭವಾನಿ ಶಂಕರ್, ಎಚ್.ಎಂ.ಶ್ರೀನಿವಾಸ್, ಬಾಲರಾಜು ಇತರರಿದ್ದರು.