ಹೊಳೆನರಸೀಪುರದ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವೈಜ್ಞಾನಿಕ ಯೂರೊ ಗೈನಕಾಲಜಿ ಕಾರ್ಯಾಗಾರವನ್ನು ಸಂಸದ ಶ್ರೇಯಸ್ ಎಂ ಪಟೇಲ್ ಉದ್ಘಾಟಿಸಿದರು. 
ಜಿಲ್ಲೆ

ಹೆಚ್ಚಿನ ಜ್ಞಾನ ಅರಿಯಲು ಕಾರ್ಯಾಗಾರ ಸಹಕಾರಿ

ರವಿಕುಮಾರ್ ಪಿ. ಕೆ

ಹೊಳೆನರಸೀಪುರ: ರಾಷ್ಟ್ರೀಯ ಮಟ್ಟದಲ್ಲಿ ನಡೆಸಬಹುದಾದ ಯೂರೊ ಗೈನಕಾಲಜಿ ಕಾರ್ಯಾಗಾರ ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿರುವುದು ಶ್ಲಾಘನೀಯ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ನುಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ತಾಯಿ ಮತ್ತು ಮಗ ಆಸ್ಪತ್ರೆಯ ಎರಡನೇ ಅಂತಸ್ತಿನ ಸಭಾಂಗಣದಲ್ಲಿ ಸಾರ್ವಜನಿಕ ಆಸ್ಪತ್ರೆ , ಜಿಲ್ಲಾ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರ ಸಂಘ ಶುಕ್ರವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಇಂತಹ ಕಾರ್ಯಾಗಾರಗಳು ಆಗಾಗ್ಗೆ ನಡೆಯುತ್ತಿರುವುದರಿಂದ ಪ್ರಸೂತಿ ಬಗ್ಗೆ ವೈದ್ಯರು ಹೆಚ್ಚಿನ ಜ್ಞಾನ ಅರಿಯಲು ಸಾಧ್ಯವಾಗಲಿದೆ ಎಂದು ಪ್ರಶಂಶಿಸಿದರು.

ಕಾರ್ಯಾಗಾರಗಳ ಜತೆಗೆ ಗ್ರಾಮೀಣ ಮಟ್ಟದಲ್ಲಿ ಪ್ರಸೂತಿ ಬಗ್ಗೆ ತಿಳಿಯಲು ಹಾಗೂ ವಿವಿಧ ರೋಗಗಳನ್ನು ತಡೆಯಲು ಅವಶ್ಯವಾಗಿ ಶಿಬಿರಗಳು ಅವಶ್ಯಕತೆ ಇದೆ ಎಂದರು.

ವೈ.ಎಂ.ಚಂದ್ರಶೇಖರ್ ಮಾತನಾಡಿ, ಯುರೋ ಗೈನಕಾಲಜಿ ಇತ್ತೀಚಿನ ದಿನಗಳಲ್ಲಿ ಅನೇಕ ಆವಿಷ್ಕಾರಗಳನ್ನು ಪಡೆಯುತ್ತಿದ್ದು, ಇಂತಹ ಶಸ್ತ್ರಚಿಕಿತ್ಸೆಗಳು ನಗರ ಪ್ರದೇಶಗಳಲ್ಲಿ ಮಾತ್ರ ಸಾಧ್ಯ ಎಂಬ ಕಲ್ಪನೆ ಇದೀಗ ಹುಸಿಯಾಗುವ ಹಂತ ತಲುಪಿದೆ. ಏಕೆಂದರೆ ಇಂತಹ ಕಾರ್ಯಾಗಾರಗಳು ಇದೀಗ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಆಯೋಜಿಸಿ ಎಲ್ಲ ಪ್ರಸೂತಿ ವೈದ್ಯರು ಸಹ ಶಸ್ತ್ರಚಿಕಿತ್ಸೆ ನಡೆಸಿ ಯಶ ಕಾಣಲು ಸಾಧ್ಯವಿದೆ ಎಂಬುದನ್ನು ತಾಲೂಕು ಮಟ್ಟದಲ್ಲಿ ಆಯೋಜಿಸಿ ಯಶಸ್ಸು ಕಾಣಬಹುದು ಎಂಬುದನ್ನು ಸಾಬೀತು ಮಾಡಬಹುದಾಗಿದೆ ಎಂದರು.

ಇಂದು ನಡೆಯುತ್ತಿರುವ ಕಾರ್ಯಾಗಾರ ಐದು ವರ್ಷಗಳ ಹಿಂದೆ ಆಸ್ಪತ್ರೆಯ ವೈದ್ಯಾಧಿಕಾರಿ ಟಿ.ಎಸ್. ಲಕ್ಷ್ಮೀಕಾಂತ್ ಅವರು ನಡೆಸಿ ಅಡಿಪಾಯ ಹಾಕಿದ್ದಾರೆ. ಅವರ ನಂತರ ಇದೀಗ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಮಕ್ಕಳ ತಜ್ಞ ಡಾ.ಧನಶೇಖರ್ ಅವರು ಆಯೋಜಿಸಿ ಮುಂದುವರಿಸಿದ್ದಾರೆ ಎಂದು ಶ್ಲಾಘಿಸಿದರು.

ಸನ್ಮಾನ: ಕಾರ್ಯಾಗಾರದಲ್ಲಿ ವೈದ್ಯರಾದ ಡಾ.ಭಾರತೀ ರಾಜಶೇಖರ್, ಡಾ.ರಂಗಲಕ್ಷ್ಮೀ, ಡಾ.ಕಿರಣ್ ಅಶೋಕ್, ಡಾ.ವೆಂಕಟೇಶ್, ಡಾ.ಟಿ.ಎಸ್. ಲಕ್ಷ್ಮೀಕಾಂತ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯ ಕಾರ್ಯಕ್ರಮ ಮೊದಲು ಬೆಳಗ್ಗೆ 11 ಗಂಟೆಗೆ ನುರಿತ ವೈದ್ಯರು ವೈಜ್ಞಾನಿಕವಾಗಿ ಪ್ರಸೂತಿ ಮಾಡುವ ಬಗ್ಗೆ ನೇರವಾಗಿ ಆಪರೇಷನ್ ಥಿಯೇಟರ್‌ನಲ್ಲಿ ಶಸ್ತ್ರ ಚಿಕಿತ್ಸೆ ಮಾಡುವ ನೇರ ದೃಶ್ಯವನ್ನು ಕಾರ್ಯಾಗಾರದಲ್ಲಿ ಹಾಜರಿದ್ದ ವೈದ್ಯರಿಗೆ ದೊಡ್ಡ ಪರದೆಯಲ್ಲಿ ತೋರಿಸಲಾಯಿತು.

ಕಾರ್ಯಾಗಾರಕ್ಕೆ ರಾಜ್ಯದ ವಿವಿಧೆಡೆಗಳಿಂದ ಸುಮಾರು 70ಕ್ಕೂ ಹೆಚ್ಚು ವೈದ್ಯರು ಆಗಮಿಸಿ ಯೂರೊ ಗೈನಕಾಲಜಿ ನೇರ ಶಸ್ತ್ರ ಚಿಕಿತ್ಸೆಯನ್ನು ವೀಕ್ಷಿಸಿದರು. 28 ಮಂದಿ ವೈದ್ಯರು ವೈದ್ಯ ಲೋಕದ ವಿಸ್ಮಯ ಗೈನಕಾಲಜಿ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಾಗಾರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಬಹುತೇಕ ವೈದ್ಯರು ಹಾಗೂ ರಾಜ್ಯದ ವಿವಿಧೆಡೆಗಳಿಂದ ಹಾಜರಿದ್ದ ವೈದ್ಯರು ಪ್ರಸೂತಿ ಬಗ್ಗೆ ನೂತನ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಅರಿವು ಪಡೆದರು.

-------------