ಉಡುಪಿ: ಸಮಾಜದಲ್ಲಿ ಸುರಕ್ಷತೆ ಮತ್ತು ಸುಭದ್ರತೆಗಾಗಿ ಕಾನೂನು ಅಗತ್ಯ. ಹಳೆಯ ಕಾನೂನುಗಳಿಗೆ ಹೊಸರೂಪರೇಶೆಗಳನ್ನು ನೀಡಿ ಹೊಸ ಕಾನೂನುಗಳನ್ನು ಜುಲೈ 1ರಿಂದ ದೇಶಾದ್ಯಂತ ಜಾರಿಗೊಳಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾದ್ಯಂತ ವ್ಯಾಪಕ ಪ್ರಚಾರ ಕೈಗೊಳ್ಳಬೇಕಾಗಿದೆ. ಜನರಿಗೆ ಕಾನೂನಿನ ಕುರಿತು ಮಾಹಿತಿ ಅತಿ ಅಗತ್ಯವಾಗಿದೆ ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಪುರುಷೋತ್ತಮ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ , ಕೋಟೆ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಮಂಗಳವಾರ ಆಯೋಜಿಸಿದ್ದ ಪೋಕ್ಸೋ ಕಾಯಿದೆ ಮತ್ತು ಹೊಸ ಕಾನೂನುಗಳ ಅರಿವು ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಯಾರೂ ಕೂಡ ಸುರಕ್ಷಿತರಲ್ಲ ಇವತ್ತಿನ ದಿನ ಚಿಕ್ಕ ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ಶೋಷಣೆ ಸಮಾಜವನ್ನು ಬೆರಗಾಗಿಸಿದೆ. ಹಾಗಾಗಿ ಪೋಕ್ಸೋ ಕಾಯಿದೆ ಅನುಷ್ಠಾನಗೊಳಿಸಲಾಗಿದೆ. ಈ ಕಾಯ್ದೆಯ ಪ್ರಕಾರ 18 ವರ್ಷದ ಒಳಗಿನ ಮಕ್ಕಳ ಮೇಲೆ ದೌರ್ಜನ್ಯ ಎಸಗಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಜೆಸಿಐ ಅಧ್ಯಕ್ಷ ಪ್ರಶಾಂತ್ ಎಸ್.ಆರ್. ಮಾಹಿತಿ ನೀಡಿದರು,. ಸಂಪನ್ಮೂಲ ವ್ಯಕ್ತಿಗಳಾಗಿ ಸಖಿ ಒನ್ ಸ್ಟಾಪ್ ಸೆಂಟರ್ ಆಡಳಿತಾಧಿಕಾರಿ ಪ್ರಮೀಳಾ ಪೂಜಾರಿ, ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ದೀಪಾ ಮಾಹಿತಿ ನೀಡಿದರು. ಗ್ರಾಪಂ ಅಧ್ಯೆ ಪ್ರಮೀಳಾ ಜತ್ತನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷ ಯೋಗೀಶ್ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಮಾಲತಿ ಪ್ರಾರ್ಥಿಸಿದರು ಪಿಡಿಒ ಶ್ರುತಿ ಕಾಂಚನ್ ಸ್ವಾಗತಿಸಿ, ಅಂಗನವಾಡಿ ಮೇಲ್ವಿಚಾರಕಿ ಫಿಲೋಮಿನಾ ವಂದಿಸಿದರು.