ಜಿಲ್ಲೆ

ರಾಜ್ಯದ ಆರ್ಥಿಕತೆಗೆ ಮೀನುಗಾರಿಕೆ ಕೊಡುಗೆ ಅಪಾರ

ಉಡುಪಿ: ರಾಜ್ಯದ ಆರ್ಥಿಕತೆಗೆ ಮೀನುಗಾರಿಕೆ ಅಪಾರ ಕೊಡುಗೆ ನೀಡುತ್ತಿದೆ. ರಾಜ್ಯ ಸರ್ಕಾರ ಮೀನುಗಾರರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಮೀನುಗಾರರ ಹಿತಾಸಕ್ತಿ ಕಾಪಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್​ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಅಟಲ್​ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಮೀನುಗಾರಿಕೆ ಇಲಾಖೆ ವತಿಯಿಂದ ನಡೆದ ಮೀನುಗಾರಿಕೆಯಲ್ಲಿ ಜೀವರಕ್ಷಕ ಸಾಧನಗಳ ಪ್ರಾಮುಖ್ಯತೆ ಅರಿವು ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಮೀನುಗಾರರು ತಮ್ಮ ಜೀವದ ಹಂಗನ್ನೇ ತೊರೆದು ಸಮುದ್ರಕ್ಕಿಳಿದು ಮೀನುಗಾರಿಕೆ ಮಾಡುತ್ತಾರೆ. ಕಳೆದ 5 ವರ್ಷಗಳಲ್ಲಿ 140 ಜನರು ಮೀನುಗಾರಿಕೆ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮೀನುಗಾರಿಕೆ ಎಂದರೆ ಬೆಂಕಿ ಜೊತೆ ಸರಸವಾಡಿದಂತೆ, ಜೀವ ರಕ್ಷಕಗಳನ್ನು ಸೂಕ್ತವಾಗಿ ಬಳಸಿಕೊಂಡು ಮೀನುಗಾರಿಕೆ ಮಾಡಬೇಕು. ರಾಜ್ಯ ಸರ್ಕಾರವು ಹಲವು ಯೋಜನೆಗಳಡಿ ಮೀನುಗಾರರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದೆ. ಇದರ ಸದುಪಯೋಗವನ್ನು ಮೀನುಗಾರರು ಬಳಸಿಕೊಳ್ಳಬೇಕು ಎಂದರು.

ಮಳೆಗಾಲದ ಸಮಯದಲ್ಲಿ ಮೀನುಗಾರಿಕೆ ನಿಷೇಧಿತ ಅವಧಿಯಲ್ಲಿ ಮೀನುಗಾರರ ಕುಟುಂಬಗಳಿಗೆ ಜೀವನೋಪಾಯಕ್ಕಾಗಿ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ರಾಜ್ಯದ ವಂತಿಗೆಯನ್ನು ದ್ವಿಗುಣಗೊಳಿಸಲಾಗಿದೆ. ಮೀನುಗಾರರಿಗೆ ಪ್ರತಿ ವರ್ಷ ಜೀವರಕ್ಷಕ ಸಾಧನಗಳಾದ ಲೈಫ್​ ಬಾಯ್​ & ಲೈಫ್​ ಜಾಕೆಟ್​ ಗಳನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ 98 ಕಿ.ಮೀ ಗೂ ಹೆಚ್ಚು ಕಡಲತೀರ ಹೊಂದಿದ್ದು, 2 ಲಕ್ಷಕ್ಕೂ ಹೆಚ್ಚು ಜನ ಮೀನುಗಾರಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 64 ಮೀನುಗಾರಿಕಾ ಗ್ರಾಮಗಳಿವೆ. 5 ತಾಲೂಕುಗಳು ಕಡಲತೀರ ಹೊಂದಿವೆ. 9328 ಸಾಂಪ್ರದಾಯಿಕ ನಾಡದೋಣಿಗಳು, ಯಾಂತ್ರೀಕೃತ ದೋಣಿಗಳು ಹಾಗೂ ಪಾತಿದೋಣಿಗಳು ಕಾರ್ಯ ನಿರ್ವಹಿಸುತ್ತಿವೆ. ಕೆಲವು ದುರ್ಘಟನೆಗಳಿಂದ ಮೀನುಗಾರರು ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತಾರೆ. ಸುರಕ್ಷತಾ ಸಾಧನೆ ಬಳಕೆಯಿಂದ ಇದನ್ನು ತಪ್ಪಿಸಬಹುದು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​ ಮಾತನಾಡಿ, ಗ್ರಾಮೀಣ ರೈತ ಮಹಿಳೆಯರು ಸ್ವಯಂ ಉದ್ಯೋಗ ಕಂಡು ಸ್ವಾವಲಂಭಿಗಳನ್ನಾಗಿಸಬೇಕೆಂಬ ಉದ್ದೇಶದಿಂದ 2 ಸಾವಿರ ಸದಸ್ಯರನ್ನು ಹೊಂದಿರುವ 2 ಮಹಿಳಾ ರೈತ ಉತ್ಪಾದಕ ಕಂಪೆನಿಗಳನ್ನು ಪ್ರಾರಂಭಿಸಲಾಗಿದ್ದು, ದೊಡ್ಡಣಗುಡ್ಡೆಯ 20 ಎಕ್ರೆ ಭೂಮಿಯನ್ನು ಕೃಷಿ ಉತ್ಪಾದನೆ ಹಾಗೂ ಮೌಲ್ಯವರ್ಧನೆ ನಡೆಸಲು ಒಡಂಬಡಿಕೆ ಮೂಲಕ ಹಸ್ತಾಂತರಿಸಲಾಗುತ್ತಿದೆ ಎಂದರು.

ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಇದೇ ವೇಳೆ ಮೀನುಗಾರರಿಗೆ ನಿವೇಶನ ಹಕ್ಕು ಪತ್ರ ಹಾಗೂ ಮನೆ ಮಂಜೂರಾತಿ ಹಕ್ಕು ಪತ್ರ, ಉಳಿತಾಯ ಪರಿಹಾರ ಯೋಜನೆಯಡಿ ಫಲಾನುಭವಿಗಳಿಗೆ ತಲಾ ಮೂರು ಸಾವಿರ ರೂ. ಚೆಕ್​, ಜೀವರಕ್ಷಕ ಸಾಧನಗಳನ್ನು ವಿತರಿಸಲಾಯಿತು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್​ ಹೆರೂರು, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್​ ಕಾಂಚನ್​, ರಾಜ್ಯ ಸಂಕಷ್ಟ ಪರಿಹಾರ ಸಮಿತಿ ಸದಸ್ಯ ಮದನ್​ ಕುಮಾರ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​, ಅಪರ ಜಿಲ್ಲಾಧಿಕಾರಿ ಅಬಿದ್​ ಗದ್ಯಾಳ್​ ಉಪಸ್ಥಿತರಿದ್ದರು. ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್​ ಆರ್.​ ಸ್ವಾಗತಿಸಿ, ಮಧುಕರ್​ ನಿರೂಪಿಸಿ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ ವಂದಿಸಿದರು.