ಮೈಸೂರು: ಜಿಲ್ಲೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಕೇವಲ ಒಂದೂವರೆ ವರ್ಷದಲ್ಲಿ 664 ಪ್ರಕರಣಗಳು ದಾಖಲಾ ಗಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರಭಾವತಿ ಎಂ. ಹಿರೇಮಠ್ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ವತಿಯಿಂದ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಏರ್ಪಡಿಸಿದ್ದ ‘ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತ ಒಂದು ದಿನದ ಕಾನೂನು ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮುಂದಿರುವ ಪ್ರಕರಣಗಳ ಒಟ್ಟು ಸಂಖ್ಯೆಯು ಆತಂಕಕಾರಿಯಾಗಿದೆ. ಒಂದೂವರೆ ವರ್ಷದಲ್ಲಿ 664 ಪ್ರಕರಣಗಳು, ಒಂದು ವರ್ಷದ ಅವಧಿಯಲ್ಲಿ 584 ಪ್ರಕರಣಗಳು ಸಮಿತಿಯಲ್ಲಿ ದಾಖಲಾಗಿವೆ. ಈ ಪ್ರಕರಣಗಳಲ್ಲಿ 420 ಸಂತ್ರಸ್ತ ಹೆಣ್ಣು ಮಕ್ಕಳು, 164 ಸಂತ್ರಸ್ತ ಗಂಡು ಮಕ್ಕಳು ಇದ್ದಾರೆ. ಜಿಲ್ಲೆಯಲ್ಲಿ 175 ಬಾಲ್ಯವಿವಾಹ ಪ್ರಕರಣಗಳು ಒಂದೂವರೆ ವರ್ಷ ಅವಧಿಯಲ್ಲಿ ನಡೆದಿದೆ. 109 ಮಕ್ಕಳು ಮನೆಬಿಟ್ಟು ಓಡಿ ಬಂದಿದ್ದಾರೆ, 67 ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. 48 ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವುದನ್ನು ಪತ್ತೆ ಹಚ್ಚಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ 411 ಪ್ರಕರಣಗಳಲ್ಲಿ ವಿಚಾರಣೆ ನಡೆಸಿ ಮಕ್ಕಳನ್ನು ಮರಳಿ ಪಾಲಕರ ವಶಕ್ಕೆ ನೀಡಿರುವುದು ಸಂತಸದ ವಿಚಾರ. 130 ಮಕ್ಕಳನ್ನು ಪಾಲನಾ ಸಂಸ್ಥೆಗಳಿಗೆ ನೀಡಲಾಗಿದ್ದು, 12 ಮಕ್ಕಳನ್ನು ದತ್ತು ನೀಡಲಾಗಿದೆ ಎಂದು ಹೇಳಿದರು.
1956ರಲ್ಲಿಯೇ ಮಾನವ ಕಳ್ಳ ಸಾಗಾಣಿಕೆ ತಡೆ ಕಾಯ್ದೆ ಜಾರಿಗೆ ಬಂದರೂ ಇಂದಿಗೂ ದೇಶದಲ್ಲಿ ಮಾನವ ಕಳ್ಳಸಾಗಣೆ ನಡೆಯುತ್ತಿದೆ. ಇದು ಕೇವಲ ನಮ್ಮ ದೇಶದ ಸಮಸ್ಯೆ ಮಾತ್ರವಲ್ಲ, ಜಾಗತಿಕ ಸಮಸ್ಯೆಯಾಗಿದೆ. ಮಾನವ ಕಳ್ಳ ಸಾಗಾಣಿಕೆಗೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ 10 ಪ್ರಕರಣಗಳು ವಿಚಾರಣೆಗೆ ಬಾಕಿ ಇದೆ. ಮಾನವ ಕಳ್ಳಸಾಗಾಣಿಕೆ ಮಾಡಿದವರನ್ನು ವೇಶ್ಯಾವಾಟಿಕೆ ಹಾಗೂ ಜೀತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ. ಇಂತಹ ಅಪರಾಧಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪರಿಹಾರ ನೀಡಲು ಹಾಗೂ ನ್ಯಾಯ ಒದಗಿಸಲು 9 ಕಾನೂನುಗಳು ಇವೆ. ಸಂತ್ರಸ್ತರಿಗೆ ಉಚಿತ ಕಾನೂನು ನೆರವು ನೀಡಬೇಕು, ಅವರಿಗೆ ಪುನರ್ವಸತಿ ಒದಗಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಜಿ. ದಿನೇಶ್ ಮಾತನಾಡಿ, ಮಾನವ ಕಳ್ಳಸಾಗಣಿಕೆ ತಡೆಗೆ ಕಠಿಣ ಕಾನೂನುಗಳು ಇದ್ದು, ಕಾನೂನು ಸಮರ್ಪಕವಾಗಿ ಅನುಷ್ಠಾನವಾದರೆ ಮಾತ್ರ ಮಾನವ ಕಳ್ಳಸಾಗಾಣಿಕೆ ತಡೆಯಲು ಸಾಧ್ಯ. ಕಳ್ಳಸಾಗಾಣಿಕೆಯಾದ ನಂತರ ಕಾನೂನು ಕ್ರಮ ಕೈಗೊಳ್ಳುವ ಬದಲು ಕಳ್ಳಸಾಗಾಣಿಕೆಯಾಗದಂತೆ ಎಚ್ಚರ ವಹಿಸುವುದು ಅಗತ್ಯ. ಮಾನವ ಕಳ್ಳಸಾಗಾಣಿಕೆಗೆ ಒಳಗಾದವರಿಗೆ ಸೂಕ್ತ ಪುನರ್ವಸತಿ ಒದಗಿಸದೆ ಇದ್ದರೆ ಮತ್ತೆ ಅದೇ ಜಾಲಕ್ಕೆ ಬೀಳುವ ಸಾಧ್ಯತೆ ಇದೆ. ಹಾಗಾಗಿ ಪುನರ್ವಸತಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಮಾತನಾಡಿ, ಗ್ರಾಮ ಮಟ್ಟದಲ್ಲಿ ಬಾಲ್ಯವಿವಾಹ, ಮಾನವ ಕಳ್ಳಸಾಗಾಣಿಕೆ ಸೇರಿದಂತೆ ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಗ್ರಾಮ ಪಂಚಾಯಿತಿ ಪಿಡಿಒಗಳು ಪ್ರಮುಖ ಪಾತ್ರ ವಹಿಸಬೇಕು. ನೀವು ನೇರವಾಗಿ ದೌರ್ಜನ್ಯವನ್ನು ತಡೆಯಲು ಸಾಧ್ಯವಿಲ್ಲ, ದೌರ್ಜನ್ಯ ನಡೆಯುತ್ತಿರುವ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ ಸಾಕು. ನಿಮ್ಮ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ ಮಾತನಾಡಿ, ಗ್ರಾಮ ಪಂಚಾಯಿತಿ ಪಿಡಿಒಗಳು ಕೇವಲ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಗಮನ ಹರಿಸಿದರೆ ಸಾಲದು, ನಮ್ಮ ದೇಶದ ಮಾನವ ಸಂಪನ್ಮೂಲವನ್ನು ಸಂರಕ್ಷಿಸುವ ಹೊಣೆಗಾರಿಕೆಯನ್ನೂ ಹೊತ್ತುಕೊಳ್ಳಬೇಕು. ಮಾನವ ಕಳ್ಳಸಾಗಾಣಿಕೆ ತಡೆದು ಸಾಮಾಜಿಕ ಸ್ವಾಸ್ಥೃವನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿಗಳಾದ ಕೃಷ್ಣರಾಜು, ಸವಿತಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಬಸವರಾಜು, ಮಾನವ ಕಳ್ಳಸಾಗಾಣಿಕೆ ತಡೆ ವಿಶೇಷ ಕಾರ್ಯಪಡೆ ಸದಸ್ಯ ವಿಲಿಯಮ್ ಕ್ರಿಸ್ಟೋಫರ್, ವಕೀಲ ರುತ್ ಅನಿಲ ಹಾಗೂ ಇತರರು ಇದ್ದರು.