ಜಿಲ್ಲೆ

ಎಸ್​ಎಂಎಂಇ ನಿವೇಶನಗಳ ಇ-ಖಾತಾ ಸಮಸ್ಯೆ ನಿವಾರಣೆಗೆ ಆದ್ಯತೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ನಕಲಿ ದಾಖಲೆ ಸೃಷ್ಟಿಸಿ ಜಾಗಗಳನ್ನು ಕಬಳಿಸುವುದನ್ನು ತಡೆಗಟ್ಟಲು ಇ&ಖಾತಾ ಯೋಜನೆ ಜಾರಿಗೊಳಿಸಿದ್ದು, ಎಸ್​ಎಂಎಂಇ ನಿವೇಶನಗಳ ಇ&ಖಾತಾ ಸಮಸ್ಯೆ ನಿವಾರಣೆಗೆ ಆದ್ಯತೆ ಮೇರೆಗೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಹೇಳಿದರು.

ಗುರುವಾರ ಕಡಿಯಾಳಿಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಎಂ.ಎಸ್​.ಎಂ.ಇ ಗಳ ಕಾರ್ಯಕ್ಷಮತೆ ಹೆಚ್ಚಿಳ, ಲೀನ್​ ಯೋಜನೆ ಮತ್ತು ಝಡ್​.ಇ.ಡಿ ಹಾಗೂ ರಫ್ತು ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆ ಉದ್ದಿಮೆಗಳನ್ನು ಇನ್ನಷ್ಟು ಸ್ಥಾಪಿಸುವ ಮೂಲಕ ಸ್ಥಳಿಯರಿಗೆ ಉದ್ಯೋಗ ದೊರಕಿಸಲು ಮುಂದಾಗಬೇಕು. ಸರ್ಕಾರ ಯೋಜನೆಗಳ ಪ್ರಯೋಜನ ಪಡೆದುಕೊಂಡು ಸ್ವಯಂ ಉದ್ಯೋಗ ಸ್ಥಾಪನೆ ಮಾಡಬಹುದು ಪಿಎಂಇಜಿಪಿ ಯೋಜನೆಯಲ್ಲಿ 301 ಲಾನುಭವಿಗಳಿಗೆ 31.51 ಕೋಟಿ ರೂ. ಸಾಲಸೌಲಭ್ಯ ಒದಗಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಸುಮಾರು 12,500 ಸಣ್ಣ ಕೈಗಾರಿಕೆಗಳು, 47- ರಿಂದ 50 ಮಧ್ಯಮ ಕೈಗಾರಿಕೆಗಳು ಹಾಗೂ 7 ಬೃಹತ್​ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 1,32,000 ಜನ ಎಂ.ಎಸ್​.ಎಂ.ಇ ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಮಟ್ಟದಲ್ಲಿರುವ ವಿವಿಧ ಎಂಟು ಸಮಿತಿಗಳ ಸಭೆ ನಡೆಸಿ ಕೈಗಾರಿಕೋದ್ಯಮಿಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದರು.

ಜಿಲ್ಲೆಯ ಶಿಕ್ಷಣವಂತ ಯುವಕರು ಉದ್ಯೋಗಕ್ಕಾಗಿ ವಿವಿಧೆಡೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ, ಅವರಿಗೆ ಇಲ್ಲಿಯೇ ಉದ್ಯೋಗಾವಕಾಶ ದೊರೆತಲ್ಲಿ ಕುಟುಂಬದವರೊಂದಿಗೆ ಇಲ್ಲಿಯೆ ನೆಲೆಕಂಡುಕೊಳ್ಳುತ್ತಾರೆ ಎಂದರು.

ಕಾಸಿಯಾ ಅಧ್ಯಕ್ಷ ಎಂ.ಜಿ. ರಾಜಗೋಪಾಲ್​ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತೀಚೆಗೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಇ-&ಖಾತಾ ಯೋಜನೆಯಿಂದ ಸಣ್ಣ ಕೈಗಾರಿಕೆಗಳಿಗೆ ಬ್ಯಾಂಕ್​ ಸಾಲಸೌಲಭ್ಯ ಲಭಿಸುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗಿದೆ. ಸಣ್ಣ ಕೈಗಾರಿಕೆಗಳಿಗೆ ಅಗತ್ಯವಿರುವ ನಿವೇಶನದ ಕೊರತೆ, ಹಾಲಿ ಕೈಗಾರಿಕಾ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ತೆರಿಗೆಯನ್ನು ಮೀಸಲಿಡಬೇಕು. ಹೊಸ ಗ್ರಾ$ಚ್ಯುಟಿ, ಕನಿಷ್ಠ ವೇತನ ಜಾರಿ ಆದೇಶ ಮರು ಪರಿಶೀಲನೆ ನಡೆಸಬೇಕು ಎಂದರು.

ರಫ್ತು ಕುರಿತು ಸತೀಶ್​ ಕೋಟಾ, ಝಡ್​.ಇ.ಡಿ ಯೋಜನೆ ಕುರಿತು ರೇಣುಕಾ ಹಾಗೂ ಲೀನ್​ ಯೋಜನೆ ಕುರಿತು ಡಾ. ಎಸ್​.ಎಂ ಜಗದೀಶ್​ ಉಪನ್ಯಾಸ ನೀಡಿದರು.

ಕಾರ್ಯಾಗಾರದಲ್ಲಿ ಐ.ಇ.ಡಿ.ಎಸ್​ ಜಂಟಿ ನಿರ್ದೇಶಕ ಡಾ. ಕೆ. ಸಾಕ್ರಟಿಸ್​, ಸಣ್ಣ ಕೈಗಾರಿಕೆಗಳ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್​ ಕುಂದರ್​, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ವಿ. ನಾಯಕ್​, ವಿ.ಟಿ.ಪಿ.ಸಿ ಮಂಗಳೂರು ವಿಭಾಗದ ಉಪನಿರ್ದೇಶಕ ಮಂಜುನಾಥ್​ ಹೆಗಡೆ, ಕಾಸಿಯಾ ಉಪಾಧ್ಯಕ್ಷ ಗಣೇಶ್​ ರಾವ್​ ಬಿ.ಆರ್​, ಖಜಾಂಜಿ ಮಂಜುನಾಥ್​ ಎಚ್​. ಮತ್ತಿತರರು ಉಪಸ್ಥಿತರಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್​ ಎನ್​ ಸಾಗರ್​ ನಿರೂಪಿಸಿ, ವಂದಿಸಿದರು.