ಬೆಳಗಾವಿ: ಪ್ರಮಾಣಿಕರಿಸಿದ ಮೆಟಾರೈಜಿಯಂ ಕ್ರಿಮಿನಾಶಕ ಬಳಸಿ ಗೊಣ್ಣೆ ಹುಳುವಿನ ಬಾಧೆ ಹತೋಟಿಗೆ ತರಲು ಸಾಧ್ಯವಿದೆ ಎಂದು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕೃಷಿ ವಿಭಾಗದ ಮುಖ್ಯಸ್ಥ ಎನ್.ಆರ್.ಯಕ್ಕೇಲಿ ಹೇಳಿದರು.
ಹುದಲಿಯ ಬೆಳಗಾಂ ಶುಗರ್ಸ್ ಪ್ರೈ.ಲಿ. ಮತ್ತು ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಸಹಯೋಗದೊಂದಿಗೆ ಗೋಕಾಕ ತಾಲೂಕಿನ ಸುಲಧಾಳ ಗ್ರಾಮದ ಶ್ರೀ ಜಡಿಸಿದ್ದೇಶ್ವರ ಮಠದಲ್ಲಿ ಕಬ್ಬು ಬೆಳೆಗಾರರಿಗೆ ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ ಕುರಿತು ಈಚೆಗೆ ಆಯೋಜಿಸಿದ್ದ ಕಾರ್ಯಾಗಾರಕ್ಕೆ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು. ಪ್ರಸಕ್ತ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಗೊಣ್ಣೆ ಹುಳುವಿನ ಬಾಧೆ ಹೆಚ್ಚಾಗಿ ಕಂಡು ಬರುತ್ತಿದೆ. ಇದು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಲ್ಲಿ ಆತಂಕ ಉಂಟುಮಾಡಿದೆ. ಕಬ್ಬು ಬೆಳೆ ಒಣಗಿ ಕಡಿಮೆ ಇಳುವರಿಗೆ ಕಾರಣವಾಗುತ್ತಿದೆ. ಕೀಟದ ಹತೋಟಿಗೆ ಮಾಗಿ ಉಳುಮೆ ಮಾಡಬೇಕು ಎಂದರು.
ಸಂಸ್ಥೆಯ ಕೀಟ ಶಾಸ್ತ್ರಜ್ಞ ಡಾ. ಮಂಜುನಾಥ ಚೌರಡ್ಡಿ, ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣಾ ತಾಂತ್ರಿಕತೆ ತಿಳಿಸಿದ ಅವರು, ಕಬ್ಬಿನ ತಾಕುಗಳಲ್ಲಿ ದೀಪಾಕರ್ಷಕ ಬಲೆಗಳನ್ನು ಅಳವಡಿಸಿ, ರಾತ್ರಿ ವೇಳೆ ಈ ಕೀಟದ ದುಂಬಿಗಳು ಆಕರ್ಷಣೆ ಹೊಂದಿ ಮೃತಪಡುತ್ತವೆ. ಸಂಸ್ಥೆಯಲ್ಲಿ ಜೈವಿಕ ಕೀಟನಾಶಕ ಉತ್ಪಾದಿಸಲಾಗುತ್ತಿದೆ. ಕಬ್ಬು ನಾಟಿ ಮಾಡುವಾಗ ಎಕರೆಗೆ ಕಳೆತ ತಿಪ್ಪೆಗೊಬ್ಬರದಲ್ಲಿ 5 ಕೆ.ಜಿ. ಕೀಟನಾಶಕ ಮಿಶ್ರಣ ಮಾಡಿದರೆ ಕೀಟಗಳನ್ನು ನಿಯಂತ್ರಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಖಾನೆಯ ಕಬ್ಬು ವಿಭಾಗದ ಪ್ರಧಾನ ವ್ಯವಸ್ಥಾಪಕ ಶ್ಯಾಮರಾವ ಬೀರ್ಜೆ, ಹಿರಿಯ ವ್ಯವಸ್ಥಾಪಕ ಶಂಕರಗೌಡ ಪಾಟೀಲ ಅವರು ಕಬ್ಬು ಬೆಳೆಗಾರರಿಗೆ ಕಾರ್ಖಾನೆಯ ಸವಲತ್ತುಗಳ ಕುರಿತು ವಿವರಿಸಿದರು. ಕಬ್ಬು ಬೆಳೆಯುವವರಿಗೆ ಕಾರ್ಖಾನೆ ವತಿಯಿಂದ ಉತ್ತಮ ತಳಿಯ ಬೀಜ ಅಥವಾ ಸಸಿ ಪೂರೈಸಲಾಗುವುದು ಎಂದರು.
ನಿಂಗೇಶ ನಾಯ್ಕ ಕಾರ್ಯಾಗಾರ ನಡೆಸಿಕೊಟ್ಟರು. ಕಾರ್ಖಾನೆ ವ್ಯಾಪ್ತಿಯ 300 ರೈತರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.