ಜಿಲ್ಲೆ

ಅಪರಾಧ ಪ್ರಕರಣ ಭೇದಿಸುವಲ್ಲಿ ಫಾರೆನ್ಸಿಕ್​ ಸೈನ್ಸ್​ ಪ್ರಮುಖ ಪಾತ್ರ

ಗೋಪಾಲಕೃಷ್ಣ ಪಾದೂರ್

ಉಡುಪಿ: ಅಪರಾಧ ಕೃತ್ಯಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಕೊಡುವಲ್ಲಿ ಫಾರೆನ್ಸಿಕ್​ ಸೈನ್ಸ್​(ವಿಧಿ ವಿಜ್ಞಾನ) ಮಹತ್ತರ ಪಾತ್ರ ವಹಿಸುತ್ತದೆ. ಡಿಎನ್​ಎ, ಬೆರಳಚ್ಚು ಸೇರಿದಂತೆ ಹಲವು ಸಾಕ್ಷಗಳು ಅಪರಾಧ ಪ್ರಕರಣ ತನಿಖೆಗೆ ನೆರವಾಗುತ್ತವೆ ಎಂದು ಮಣಿಪಾಲ ಕೆಎಂಸಿಯ ಫಾರೆನ್ಸಿಕ್​ ಮೆಡಿಸಿನ್​ ಮತ್ತು ಟಾಕ್ಸಿಕೋಲಜಿ ವಿಭಾಗದ ಪ್ರಾಧ್ಯಾಪಕ ಡಾ.ವಿನೋದ್​ ನಾಯಕ್​ ಹೇಳಿದ್ದಾರೆ.

ಮಂಗಳವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಅಪರಾಧ ಕೃತ್ಯಗಳಲ್ಲಿ ಫಾರೆನ್ಸಿಕ್​ ಹಾಗೂ ಡಿಎನ್​ಎ ಪರೀಕ್ಷೆಗಳ ಮಹತ್ವ ಕುರಿತ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ಅಪರಾಧಿ ಕೃತ್ಯದ ಸ್ಥಳದಲ್ಲಿ ಒಂದಲ್ಲ ಒಂದು ಸುಳಿವು ಬಿಟ್ಟು ಹೋಗಿರುತ್ತಾನೆ. ಅದನ್ನು ಸರಿಯಾಗಿ ಕಂಡು ಹುಡುಕಿ ವೈಜ್ಞಾನಿಕವಾಗಿ ಆರೋಪ ಸಾಬೀತು ಪಡಿಸುವಲ್ಲಿ ವಿಧಿ ವಿಜ್ಞಾನ ತಂಡ ಮಹತ್ವದ ಪಾತ್ರ ವಹಿಸುತ್ತದೆ. ರಾಜ್ಯದಲ್ಲಿ ಫಾರೆನ್ಸಿಕ್​ ತಜ್ಞ ಸಂಖ್ಯೆ ಕಡಿಮೆ ಇದೆ. ಕೆಲವು ಜಿಲ್ಲೆಗಳಲ್ಲಿ ಫಾರೆನ್ಸಿಕ್​ ತಜ್ಞರೇ ಇಲ್ಲ. ಹಾಗಾಗಿ ಅಪರಾಧ ಸ್ಥಳಗಳಲ್ಲಿ ಸಾಕ್ಷಗಳನ್ನು ಸಂಗ್ರಹಿಸಲು ಸಾಕಷ್ಟು ತೊಡಕಾಗುತ್ತದೆ. ಇತ್ತೀಚೆಗೆ ಪೊಲೀಸ್​ ಇಲಾಖೆಗಳಲ್ಲಿ ಕೆಂ ಸೀನ್​ ಅಧಿಕಾರಿಗಳನ್ನು ನೇಮಕ ಮಾಡ ಲಾಗುತ್ತದೆ. ಇವರಿಗೆ ಫಾರೆನ್ಸಿಕ್​ ಸೈನ್ಸ್​ ಬಗ್ಗೆ ತರಬೇತಿ ನೀಡಲಾಗುತ್ತಿದ್ದು, ಸಾಕ್ಷಗಳನ್ನು ಸಂಗ್ರಹಿಸಿ ಫಾರೆನ್ಸಿಕ್​ ತಜ್ಞರಿಗೆ ಒಪ್ಪಿಸುತ್ತಾರೆ ಎಂದರು.

ಸಹಾಯಕ ಪ್ರಾಧ್ಯಾಪಕ ಡಾ.ಶಂಕರ್​ ಎಂ.ಬಿ. ಮಾತನಾಡಿ, ಫಾರೆನ್ಸಿಕ್​ ಅಂದರೆ ಕೇವಲ ಮರಣೋತ್ತರ ಪರೀಕ್ಷೆ ಮಾತ್ರವಲ್ಲ. ಅಪರಾಧ ಸ್ಥಳದಿಂದ ಪ್ರಾರಂಭವಾಗಿ, ಆರೋಪಿಗೆ ಶಿಕ್ಷೆ ಸಿಗುವವರೆಗೂ ಮುಂದುವರೆಯುತ್ತದೆ. ಅಪರಾಧ ಸ್ಥಳಗಳಲ್ಲಿ ಸಿಗುವ ಕುರುಹುಗಳನ್ನು ಸರಿಯಾಗಿ ಗುರುತಿಸಿ, ಪರಿಶೀಲಿಸುವುದರಿಂದ ಅಪರಾಧ ಕೃತ್ಯದ ಸಂಪೂರ್ಣ ಮಾಹಿತಿ ಫಾರೆನ್ಸಿಕ್​ ಸೈನ್ಸ್​ ನಿಂದ ಪತ್ತೆ ಹಚ್ಚ ಬಹುದಾಗಿದೆ ಎಂದು ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್​ ಶೆಟ್ಟಿ ಅಲೆವೂರು ವಹಿಸಿದ್ದರು. ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್​ ಮಂಜನಬೈಲು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್​ ಪೊಲ್ಯ, ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್​ ಆರಾಡಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ರಹೀಂ ಉಜಿರೆ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್​ ಮಾರ್ಪಳ್ಳಿ ವಂದಿಸಿದರು. ಚೇತನ್​ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು.