ಜಿಲ್ಲೆ

13ರಂದು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕಾರ್ಯಾಗಾರ

madikerimailmanju

ಚಿಕ್ಕಮಗಳೂರು: ಜಿಲ್ಲಾ ಸರ್ಕಾರಿ ನೌಕರರ ಸಂಘ ಹಾಗೂ ಶಿವಮೊಗ್ಗ ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ ಮಾ.13 ರಂದು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕುರಿತ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಹೇಳಿದರು.

ನಗರದ ಕುವೆಂಪು ಕಲಾ ಮಂದಿರದಲ್ಲಿ ಬೆಳಗ್ಗೆ 9.30 ರಿಂದ ಸಂಜೆ 5 ರ ವರೆಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಅವಶ್ಯವಿರುವ ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ ನೀಡಿ ಜಿಲ್ಲೆಯ 750 ವಿದ್ಯಾರ್ಥಿಗಳಿಗೆ ಮಾತ್ರ ಕಾರ್ಯಾಗಾರದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿದ್ಯಾರ್ಥಿಗಳಿಗೆ ಪಾಸ್ ಕಡ್ಡಾಯ:

ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಪಾಸ್ ಕಡ್ಡಾಯ. ನಗರದ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಮಾ.5 ರಿಂದ 12 ರವರೆಗೆ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಅಭ್ಯರ್ಥಿಗಳೇ ಆಗಮಿಸಿ ಉಚಿತ ಪಾಸ್ ಪಡೆಯಬೇಕು. ಮಾಹಿತಿಗಾಗಿ 9482327101 ಗೆ ಸಂಪರ್ಕಿಸಬಹುದು ಎಂದರು. ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಡಾ. ಕೆ.ಎನ್.ರಮೇಶ್ ಉದ್ಘಾಟಿಸಲಿದ್ದು, ಎಸ್ಪಿ ಎಚ್.ಎಂ.ಅಕ್ಷಯ್, ಜಿಪಂ ಸಿಇಒ ಎಸ್.ಪೂವಿತಾ, ಅರಣ್ಯ ಸಂರಕ್ಷಣಾಧಿಕಾರಿ ಡಾ. ಸುನಿಲ್ ಪನ್ವಾರ್ ಭಾಗವಹಿಸಲಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಕೆ.ದಯಾನಂದ್, ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್, ಎಸಿ ಡಾ. ಎಚ್.ಎಲ್.ನಾಗರಾಜ್, ಶಿವಮೊಗ್ಗದ ಮನೋವೈದ್ಯ ಡಾ.ಅರವಿಂದ ತಿಮ್ಮಯ್ಯ, ತರಬೇತುದಾರ ಮೈಸೂರು ಆರ್.ಸುಬ್ರಹ್ಮಣ್ಯ, ತಹಸೀಲ್ದಾರ್ ಡಾ. ಕಾಂತರಾಜ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸಮುದಾಯ ಭವನ ಯೋಜನೆ:

ನೌಕರರ ಹಾಗೂ ಸಾರ್ವಜನಿಕರ ಹಿತಕ್ಕಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಹೌಸಿಂಗ್‍ ಬೋರ್ಡ್‍ನಲ್ಲಿರುವ ಸಂಘದ ನಿವೇಶನದಲ್ಲಿ 5.5 ಕೋಟಿ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು ಸರ್ಕಾರ ಈ ಸಾಲಿನ ಬಜೆಟ್‍ನಲ್ಲಿ 2 ರಿಂದ 3 ಕೋಟಿ ರೂ. ಅನುದಾನ ನೀಡುವ ಸಾಧ್ಯತೆ ಇದೆ. ಭವನಕ್ಕಾಗಿ ನೌಕರರ ಒಂದು ದಿನದ ವೇತನ ನೀಡುವಂತೆ ಮನವಿ ಮಾಡಲಾಗುತ್ತಿದ್ದು ಅದರಿಂದ 1 ಕೋಟಿ ಬರುವ ನಿರೀಕ್ಷೆ ಹೊಂದಲಾಗಿದೆ ಎಂದು ಅವರು ಇದೇ ಸಂದರ್ಭ ಹೇಳಿದರು.