ಚನ್ನಗಿರಿ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಸಲುವಾಗಿ ತಾಲೂಕಿನ ಐದು ಕೇಂದ್ರಗಳಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ರಾತ್ರಿ ಶಾಲೆಯನ್ನು ಪ್ರಾರಂಭಿಸುವ ಯೋಜನೆ ನಡೆದಿದೆ ಎಂದು ಶಾಸಕ ಬಸವರಾಜ್ ಶಿವಗಂಗಾ ತಿಳಿಸಿದರು.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಒಂದು ದಿನದ ಕಾರ್ಯಾಗಾರ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ವಿಜಯ ಸಂಕಲ್ಪ ಕ್ರಿಯಾಯೋಜನೆ ಪುಸ್ತಕ ಬಿಡುಗಡೆ ನೆರವೇರಿಸಿ ಶನಿವಾರ ಮಾತನಾಡಿದರು.
10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಬಿಟ್ಟ ನಂತರ ಸಂಜೆ 6ರಿಂದ 9ರ ವರೆಗೆ ಶಾಲೆ ನಡೆಸಲು ಸಿದ್ಧತೆ ಪ್ರಾರಂಭವಾಗಿದೆ. ಚನ್ನಗಿರಿ ಸೇರಿದಂತೆ ತಾಲೂಕಿನ ಸಂತೇಬೆನ್ನೂರು, ನಲ್ಲೂರು, ತಾವರೆಕೆರೆ ಹಾಗೂ ದೇವರಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು ರಾತ್ರಿ ಶಾಲೆಗಾಗಿ ಅಯ್ಕೆ ಮಾಡಲಾಗಿದೆ ಎಂದರು.
ಈಗಾಗಲೇ ಶಿಕ್ಷಕರನ್ನು ಗುರುತಿಸಲಾಗಿದೆ. ರಾತ್ರಿ ಶಾಲೆಗೆ ಬರುವಂತ ಶಿಕ್ಷಕರಿಗೆ ಪ್ರತಿ ಶನಿವಾರ ರಜೆ ನೀಡಲಾಗುತ್ತದೆ. ಪರೀಕ್ಷೆಯಲ್ಲಿ ರಾತ್ರಿ ಶಾಲೆಯಲ್ಲಿ ಭಾಗವಹಿಸಿ ಹೆಚ್ಚು ಅಂಕ ಪಡೆದು ತಾಲೂಕಿಗೆ ಪ್ರಥಮವಾಗಿ ಅಯ್ಕೆಯಾದ ವಿದ್ಯಾರ್ಥಿಗೆ ಪ್ರಥಮ ಬಹುಮಾನ 3 ಲಕ್ಷ ರೂ. ದ್ವಿತೀಯ ಬಹುಮಾನ 2 ಲಕ್ಷ ರೂ. ತೃತೀಯ 1 ಲಕ್ಷ ರೂ. ಬಹುಮಾನ ಸಂತ ಖರ್ಚಿನಲ್ಲಿ ಕೊಡುವುದಾಗಿ ಶಾಸಕರು ಭರವಸೆ ನೀಡಿದರು.
ತಾಲೂಕಿನ ಎಲ್ಲ ಶಾಲೆಗಳಲ್ಲಿ ಬುದ್ದಿವಂತ ಶಿಕ್ಷಕರಿದ್ದು, ನಿಮ್ಮಲ್ಲಿನ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬರುವಂತೆ ಮಾಡಿ ಎಂದು ಮನವಿ ಮಾಡಿದರು.
ಮಕ್ಕಳಿಗೆ ಸೇತುಬಂಧ ಕಾರ್ಯಕ್ರಮ, ಪಠ್ಯವಿಷಯ ಪರಿಚಯ, ತಾಯಂದಿರ ಸಭೆ, ಪೋಷಕರ ಸಭೆ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳತ್ತ ವಿಶೇಷ ಗಮನ, ರಸಪ್ರಶ್ನೆ, ಗುಂಪು ಅಧ್ಯಯನ, ಹಿರಿಯ ವಿದ್ಯಾರ್ಥಿಗಳ ನೆರವು, ಮನೆ ಮನೆ ಭೇಟಿ ಸೇರಿದಂತೆ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಫಲಿತಾಂಶ ಸುಧಾರಿಸಬೇಕಿದೆ ಎಂದರು.
ಜಿಲ್ಲಾ ಉಪನಿರ್ದೇಶಕ ಕೊಟ್ರೇಶ್, ಬಿಈಒ ಎಲ್. ಜಯಪ್ಪ, ಬಿಆರ್‌ಸಿ ಡಾ.ಎಸ್. ಶಂಕರಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಿ. ಸ್ವಾಮಿ, ಎಂ.ಆರ್. ಲೋಕೇಶ್ವರಯ್ಯ ಇದ್ದರು.