ಜಿಲ್ಲೆ

ಬೆಂಗಳೂರು ಜಲಮಂಡಳಿ ಕಾರ್ಯಕ್ಕೆ ಮೆಚ್ಚುಗೆ; ನಗರದ ವರ್ಲ್ಡ್​ ಟ್ರೇಡ್​ ಸೆಂಟರ್​ನಲ್ಲಿ ಕಾರ್ಯಾಗಾರ

ಬೆಂಗಳೂರು: ನೀರಿನ ಅಭಾವದ ಸಮಯದಲ್ಲಿ ಬೆಂಗಳೂರು ಜಲಮಂಡಳಿ ವತಿಯಿಂದ ಅಳವಡಿಸಿಕೊಳ್ಳಲಾದ ಸುಸ್ಥಿರ ಹಾಗೂ ಸಮರ್ಪಕ ವ್ಯವಸ್ಥೆಗಳ ಬಗ್ಗೆ ಯುನೈಟೆಡ್​ ನೇಷನ್​ ಕ್ಲೆಮೇಟ್​ ಚೆಂಜ್​ ಇನ್ನೋವೇಷನ್​ ಕಾರ್ಯಾಗಾರದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ನಗರದ ವರ್ಲ್ಡ್​ ಟ್ರೇಡ್​ ಸೆಂಟರ್​ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಯುಎನ್​ ಕ್ಲೆಮೇಟ್​ ಚೇಂಜ್​ 5ನೇ ಸಿಸ್ಟೇಮಿಕ್​ ಇನ್ನೋವೇಷನ್​ ಕಾರ್ಯಾಗಾರದಲ್ಲಿ ಜಲಮಂಡಳಿ ಅಧ್ಯ ಡಾ. ವಿ.ರಾಮ್​ಪ್ರಸಾತ್​ ಮನೋಹರ್​ ಭಾಗವಹಿಸಿ, ನಗರದ ನೀರು ಸರಬರಾಜು, ನಿರ್ವಹಣೆ, ಎದುರಾದ ಸವಾಲುಗಳು, ಅವುಗಳನ್ನು ಸಮರ್ಪಕವಾಗಿ ನಿಭಾಯಿಸಿದ ಕ್ರಮಗಳ ಬಗ್ಗೆ ತಿಳಿಸಿದರು.

ರಾಜಧಾನಿ ನಿವಾಸಿಗಳಿಗೆ ಶುದ್ಧ ಹಾಗೂ ಸಮರ್ಪಕವಾದ ನೀರು ಸರಬರಾಜು ಮಾಡುವುದು ಹಾಗೂ ಒಳಚರಂಡಿ ವ್ಯವಸ್ಥೆ ನಿಭಾಯಿಸುವ ಕೆಲಸ ಬೆಂಗಳೂರು ಜಲಮಂಡಳಿಯದ್ದಾಗಿದೆ. ನಗರದಲ್ಲಿ ಶೇ.40 ಜನರು ಅಂತರ್ಜಲದ ಮೇಲೆ ಅವಲಂಬಿತರಾಗಿದ್ದಾರೆ. ಮಳೆಯ ಕೊರತೆಯಿಂದ ಅಂತರ್ಜಲ ಕುಸಿದ ಕಾರಣ ಶೇ.50 ಕೊಳವೆಬಾವಿಗಳು ಬತ್ತಿಹೋಗಿವೆ. ಇದರಿಂದ ಕಾವೇರಿ ನೀರಿನ ಮೇಲಿನ ಒತ್ತಡ ಹೆಚ್ಚಾಯಿತು. ಎದುರಾಗಿದ್ದ ನೀರಿನ ಅಭಾವವನ್ನು ಹೊಸ ತಂತ್ರಾನಗಳು ಹಾಗೂ ಸುಸ್ಥಿರ ಯೋಜನೆಗಳ ಅಳವಡಿಕೆಯಿಂದಾಗಿ ಬೆಂಗಳೂರು ಜಲಮಂಡಳಿ ಸಮರ್ಥವಾಗಿ ನಿಭಾಯಿಸಿದೆ ಎಂದರು.

ನೀರಿನ ಸಮರ್ಪಕ ಬಳಕೆಗೆ ಕಟ್ಟುನಿಟ್ಟಿನ ಕ್ರಮಗಳ ಅಳವಡಿಕೆ, ನೀರಿನ ಉಳಿತಾಯಕ್ಕೆ ಏರಿಯೇಟರ್​ ಬಳಕೆ, ಸಂಸ್ಕರಿಸಿದ ನೀರಿನ ಬಳಕೆಗೆ ಪ್ರೋತ್ಸಾಹ, ಕೊಳವೆಬಾವಿಗಳ ನಿರ್ವಹಣೆಗೆ ಆಧುನಿಕ ತಂತ್ರಾನಗಳ ಅಳವಡಿಕೆ ಹೀಗೆ ಹಲವು ನೂತನ ಕ್ರಮಗಳಿಂದ ನೀರಿನ ಸಮಸ್ಯೆ ನಿಯಂತ್ರಿಸಲಾಗಿದೆ. ಆದರೆ, ಮುಂದಿನ ಭವಿಷ್ಯದ ಅವಶ್ಯಕತೆಗೆ ಇನ್ನಷ್ಟು ಸುಸ್ಥಿರ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ತಿಳಿಸಿದರು.