ಉಳ್ಳಾಲ: ಶಿಕ್ಷಕರು ವಿದ್ಯಾರ್ಥಿಗಳ ಸಮಸ್ಯೆ ಅರಿತು ತಳಮಟ್ಟದಿಂದಲೇ ಪರಿಹಾರ ನೀಡಬೇಕು. ವಿದ್ಯಾರ್ಥಿಗಳಲ್ಲಿರುವ ವಿಶೇಷ ಪ್ರತಿಭೆ ಗುರುತಿಸಿ, ಉನ್ನತಮಟ್ಟಕ್ಕೆ ಬೆಳೆಯಲು ಸಹಕರಿಸಬೇಕು ಎಂದು ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಹೇಳಿದರು.
ಮಂಗಳೂರಿನ ಶಾರದಾ ಶಿಕ್ಷಣ ಸಂಸ್ಥೆಯ ಅಧೀನದಲ್ಲಿರುವ ತಲಪಾಡಿಯ ಶಾರದಾ ವಿದ್ಯಾನಿಕೇತನದ ಭೂವರಾಹ ಸಭಾಂಗಣದಲ್ಲಿ ಒಂದು ದಿನದ ಶಿಕ್ಷಕ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ.ಜ್ಞಾನೇಶ್ವರ್ ಪೈ ಮರೂರ್ ಮಾತನಾಡಿ, ಇಂದಿನ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಶಿಕ್ಷಕರಿಗೆ ನಿರಂತರ ಕಲಿಕೆಯ ಅವಶ್ಯಕತೆಯಿದೆ. ಆಗ ಮಾತ್ರ ನಾವು ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಕಂಡುಬರುತ್ತಿರುವ ವಿವಿಧ ಮಾನಸಿಕ ಸಮಸ್ಯೆಗಳು ಪಾಲಕರಿಗೆ ಸವಾಲಾಗಿದ್ದು, ಅವುಗಳನ್ನು ನಿರ್ವಹಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಆಪ್ತ ಸಮಾಲೋಚಕ ಡಾ.ಗುರುರಾಜ್ ಇಟಗಿ ಅಭಿಪ್ರಾಯಪಟ್ಟರು.
ರಾಜವರ್ಧನ್, ಶಾರದಾ ಆಯುರ್ವೇದ ಆಸ್ಪತ್ರೆಯ ಆಪ್ತ ಸಮಾಲೋಚಕಿ ಡಾ.ಸೌಮ್ಯಾ ಲಕ್ಷ್ಮೀ ಮಾತನಾಡಿದರು. ಕಾರ್ಯಾಗಾರದಲ್ಲಿ 650 ಮಂದಿ ಭಾಗವಹಿಸಿದ್ದರು. ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಸಮೀರ್ ಪುರಾಣಿಕ್ ಉಪಸ್ತಿತರಿದ್ದರು. ದೈನಿಕ ಶಾಲೆಯ ಪ್ರಾಂಶುಪಾಲ ಮೋಹನ್‌ದಾಸ್ ಸ್ವಾಗತಿಸಿದರು. ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಸುಷ್ಮಾ ದಿನಕರ್ ವಂದಿಸಿದರು. ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಸುರೇಶ್ ರಾವ್ ಅತ್ತೂರು ಕಾರ್ಯಕ್ರಮ ನಿರೂಪಿಸಿದರು.