ಜಿಲ್ಲೆ

ಹಿಂದುಳಿದ ವರ್ಗಗಳ ಸಮೀಕ್ಷೆಗೆ ಸಹಕರಿಸಬೇಕು

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2025 ನಮ್ಮ ಸಮೀಕ್ಷೆ ನಮ್ಮ ಜವಾಬ್ದಾರಿ ಎಂಬ ಮನೆ ಮನೆ ಸಮೀಕ್ಷೆ ಸೆ. 22ರಿಂದ ಪ್ರಾರಂಭವಾಗಿ ಅ.7 ರವರೆಗೆ ನಡೆಯಲಿದೆ, ಈ ಸಮೀಕ್ಷೆಗೆ ಜನರು ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಮನವಿ ಮಾಡಿದರು.

ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಕುರಿತು ಜಿಲ್ಲೆಯ ಸಮುದಾಯ ಮುಖಂಡರು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ  ಹಮ್ಮಿಕೊಂಡಿದ್ದ ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸಮೀಕ್ಷೆಯಲ್ಲಿ ಸುಮಾರು 60 ಪ್ರಶ್ನೆಗಳಿದ್ದು ಸಮೀಕ್ಷೆ ಕಾರ್ಯವನ್ನು ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆಯ ಆಧಾರದ ಮೇಲೆ ಸಮೀಕ್ಷಾದಾರರು ಸಮೀಕ್ಷೆ ಮಾಡುವುದರಿಂದ ಸಮೀಕ್ಷಾದಾರರು ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು ಪಡಿತರ ಚೀಟಿ, ಆಧಾರ್‌ಕಾರ್ಡ್ ಅಥವಾ ಆಧಾರ್ ಸಂಖ್ಯೆ ನೀಡಬೇಕು, ವಿಕಲಚೇತನರಾಗಿದ್ದರೆ ಯುಐಡಿ ಕಾರ್ಡ್ ಅಥವಾ ಅಂಗವಿಕಲ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ ಸಿದ್ದ ಮಾಡಿ ಇಟ್ಟುಕೊಂಡಿದ್ದರೆ ಸಮೀಕ್ಷೆ ಸುಲಭವಾಗುತ್ತದೆ ಮತ್ತು ವೇಗವಾಗುತ್ತದೆ ಎಂದು ತಿಳಿಸಿದರು. ಜತೆಗೆ ಕುಟುಂಬದ ಎಲ್ಲ ಸದಸ್ಯರ ಆಧಾರ್‌ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ ಓಟಿಪಿ ಬರುವುದರಿಂದ ಆಧಾರ್ ಕಾರ್ಡ್‌ಗೆ ಮೊಬೈಲ್ ನಂಬರ್‌ಲಿಂಕ್ ಆಗಿದೆ ಎಂಬುದನ್ನು ಖಚಿತ ತಪಡಿಸಿಕೊಳ್ಳಿ ಎಂದರು.

ಮೊಬೈಲ್ ಸಂಖ್ಯೆ ಲಿಂಕ್ ಮಾಡಿಸಿಕೊಳ್ಳಿ: ಸಮೀಕ್ಷೆ ಸಂಧರ್ಭದಲ್ಲಿ ಮನೆಯಲ್ಲಿ ಇಲ್ಲದಿದ್ದರೆ ಆ ಸಂದರ್ಭದಲ್ಲಿ ಮನೆಯಲ್ಲಿ ಇರುವ ಸದಸ್ಯರು ಮನೆಯಲ್ಲಿ ಇಲ್ಲದಿರುವ ಸದಸ್ಯರಿಗೆ ಫೋನ್ ಕರೆ ಮಾಡಿ ಒಟಿಪಿ ಪಡೆದು ಮಾಹಿತಿ ನೀಡಬೇಕಾಗುತ್ತದೆ. ಆಧಾರ್‌ಕಾರ್ಡ್ ಇದ್ದು ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಇಲ್ಲದಿದ್ದರೆ ಹತ್ತಿರದ ಆಧಾರ್ ಎನ್ರೊಲ್ಮೆಂಟ್ ಸೆಂಟರ್‌ಗೆ ಭೇಟಿ ನೀಡಿ ಈಗ ಬಳಸುತ್ತಿರುವ ಮೊಬೈಲ್ ನಂಬರ್‌ಗೆ ಲಿಂಕ್ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನೀತಿ ನಿರೂಪಣೆಗೆ ಆಧಾರ: ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿದುಕೊಂಡು ರಾಜ್ಯದ ನೀತಿ ನಿರೂಪಣೆಯನ್ನು ಕೈಗೊಳ್ಳಲು ಸಮೀಕ್ಷೆ ಆಧಾರವಾಗಿರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ಎನ್.ಅನುರಾಧಾ ತಿಳಿಸಿದರು. ಸಮೀಕ್ಷೆ ಕಾರ್ಯವೂ ಸೇವೆಯ ಒಂದು ಭಾಗವಾಗಿದೆ. ಈ ಕಾರ್ಯವನ್ನು ಅನುಷ್ಟಾನವಾಗುವಂತೆ ಮಾಡುವುದು ನಮ್ಮ ನಿಮ್ಮೆಲ್ಲರ ಜವಬ್ದಾರಿಯಾಗಿದೆ ಎಂದರು. ಪ್ರಶ್ನಾವಳಿಯಲ್ಲಿ ಪ್ರತಿ ಸದಸ್ಯರ ವಿದ್ಯಾರ್ಹತೆ, ಕೌಶಲ ತರಬೇತಿಯ ಅಗತ್ಯತೆ, ಆದಾಯ, ಕುಟುಂಬದ ಸ್ಥಿರ ಮತ್ತು ಚರಾಸ್ತಿ ವಿವರಗಳು ಧರ್ಮ, ಜಾತಿ, ಉಪಜಾತಿ ಹಾಗೂ ಕುಲಕಸುಬು ಮುಂತಾದ ವಿಷಯಗಳು ಸೇರಿ ಎಲ್ಲಾ ಪ್ರಶ್ನೆಗಳಿಗೂ ಕುಟುಂಬದ ಸದಸ್ಯರು ಸರಿಯಾದ ಮಾಹಿತಿ ನೀಡಬೇಕು ಎಂದರು.