ಜಿಲ್ಲೆ

ಆಂತರಿಕ ದೂರು ಸಮಿತಿ ಕಡ್ದಾಯ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ, ಕೈಗಾರಿಕೆ, ಶಾಲಾ-ಕಾಲೇಜು, ಸಂಘ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿಯನ್ನು ಕಡ್ದಾಯವಾಗಿ ರಚಿಸಬೇಕು ಎಂದು ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶ್ರೀಶೈಲ್ ಬಾಗಾಡಿ ಹೇಳಿದರು.

ದೇವನಹಳ್ಳಿಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯ ಮಹಿಳಾ ಆಯೋಗ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಲೈಂಗಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕುರಿತ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದರು. ಮಹಿಳೆಯರಿಗೆ ಘನತೆ ಮತ್ತು ಸುರಕ್ಷತೆಯ ವಾತಾವರಣ ಕಲ್ಪಿಸುವ ಉದ್ದೇಶದಿಂದ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ, ಕಿರುಕುಳ ತಡೆಗಟ್ಟಲು ಕೇಂದ್ರ ಸರ್ಕಾರ ಪಾಶ್ 2013 ಕಾಯ್ದೆಯಡಿ ಆಂತರಿಕ ದೂರು ಸಮಿತಿಗಳನ್ನು ರಚಿಸಬೇಕೆಂದು ಸೂಚಿಸಿದೆ, ಸಮಿತಿ ರಚಿಸದೇ ಇದ್ದ ಸಂದರ್ಭದಲ್ಲಿ ಆ ಸಂಸ್ಥೆಗೆ ದಂಡ ವಿಧಿಸುವ, ನೋಟಿಸ್ ನೀಡುವ ಅಥವಾ ಅವರ ಲೈಸೆನ್ಸ್ ರದ್ದು ಮಾಡುವ ಸಾಧ್ಯತೆ ಇರುತ್ತದೆ. ದೌರ್ಜನ್ಯ ಕಿರುಕುಳಕ್ಕೆ ಒಳಪಟ್ಟ ಮಹಿಳೆಯರು (ಶಿ ಬಾಕ್ಸ್) ಮೂಲಕ ದೂರು ದಾಖಲಿಸಬಹುದು ಎಂದರು.

ದೂರು ಸಮಿತಿ ಇರಲೇಬೇಕು:

ಕರ್ನಾಟಕ ಮಹಿಳಾ ಆಯೋಗದ ಕಾರ್ಯದರ್ಶಿ ಲತಾ ಮಾತನಾಡಿ ಸರ್ಕಾರಿ, ಅರೆ ಸರ್ಕಾರಿ, ಸಂಘಟಿತ, ಅಸಂಘಟಿತ ಹೀಗೆ ಯಾವುದೇ ಕೆಲಸದ ಸ್ಥಳದಲ್ಲಿ ’ಪಾಶ್’ ಕಾಯ್ದೆಯಡಿ ಆಂತರಿಕ ದೂರು ಸಮಿತಿ ಇರಬೇಕಾದದ್ದು ಕಡ್ಡಾಯವಾಗಿದೆ ಎಂದರು. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮುಖ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರೆ ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ನೋಡಲ್ ಅಧಿಕಾರಿಗಳು ಇರುತ್ತಾರೆ. ಕೆಲಸ ಮಾಡುವ ಮಹಿಳೆಯರು ಮುಂದಿನ ಭವಿಷ್ಯ ಇವುಗಳ ಕಾರಣಕ್ಕಾಗಿ ದೂರು ನೀಡಲು ಹಿಂಜರಿಯುವವರೇ ಹೆಚ್ಚು ಆಂತರಿಕ ಸಮಿತಿಯಲ್ಲಿ ಮಹಿಳೆಯರೇ ಇರುವುದರಿಂದ ಸಂತ್ರಸ್ತೆ ದೂರು ನೀಡಲು ಹಿಂಜರಿಯಬೇಕಿಲ್ಲ. ಈ ಸಮಿತಿ ವರದಿಯನ್ನಾಧರಿಸಿ ದೌರ್ಜನ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಅರಿವು ನೀಡುವುದು ಅಗತ್ಯ: ಜಿಲ್ಲೆಯಲ್ಲಿ ಕಾರ್ಖಾನೆಗಳು ಹೆಚ್ಚಿದ್ದು ಇದರಲ್ಲಿ ಮಹಿಳೆಯರೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ, ಕಿರುಕುಳದ ಸ್ವರೂಪ ಯಾವ ರೀತಿ ಇರುತ್ತದೆ ಎಂಬ ಬಗ್ಗೆ ಉದ್ಯೋಗಿಗಳಿಗೆ ಸೂಕ್ತ ಮಾಹಿತಿ ಇರುವುದಿಲ್ಲ ಹಾಗಾಗಿ ಮಹಿಳೆಯರಿಗೆ ಅರಿವು ನೀಡುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ತಿಳಿಸಿದರು. ಹಾಗಾಗಿ ಸಂಬಂಧಪಟ್ಟ ಇಲಾಖೆಗಳು ಪಾಶ್ ಕಾಯ್ದೆಯ ಬಗ್ಗೆ ತಿಳಿಸಿ ಅದರ ಬಗ್ಗೆ ಅರಿವು ಮೂಡಿಸಬೇಕು ಜತೆಗೆ ಆಂತರಿಕ ದೂರು ಸಮಿತಿ ರಚಿಸಬೇಕು ಅದರಲ್ಲಿ ಸಂಸ್ಥೆಯ ಸದಸ್ಯರ ಜತೆಗೆ ಮಹಿಳೆಯರ ಬಗ್ಗೆ ಕಾಳಜಿ ಇರುವ ಪಾಶ್‌ಕಾಯ್ದೆ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಇರುವ ಸದಸ್ಯರನ್ನು ನೇಮಿಸಿಕೊಳ್ಳಬೇಕು ಎಂದು ಸೂಚಿಸಿದರು.

ದೌರ್ಜನ್ಯ ತಡೆಗೆ ಸಹಕಾರಿ: ಸಂಪನ್ಮೂಲ ವ್ಯಕ್ತಿಯಾಗಿ ಡಾ.ಸ್ವಪ್ನಾ ಪಾಶ್ ಕಾಯ್ದೆಯ ಸಂಪೂರ್ಣ ಮಾಹಿತಿ ನೀಡಿದರು. ವಿಶಾಖಾ ಮಾರ್ಗಸೂಚಿಯ ಪರಿಣಾಮ ರೂಪುಗೊಂಡ ನಂತರ ಪಾಶ್ ಕಾಯ್ದೆ ಬಂದಮೇಲೆ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಕಿರುಕುಳ ತಡೆಗಟ್ಟಲು ಸಾಧ್ಯವಾಗುತ್ತಿದೆ ಇದರಿಂದ ಮಹಿಳೆ ತನ್ನ ಕಾರ್ಯಕ್ಷೇತ್ರದಲ್ಲಿ ಲೈಂಗಿಕ ದೌರ್ಜನ್ಯ ಮುಕ್ತ ವಾತಾವರಣದಿಂದ ಕೆಲಸ ಮಾಡುವ ಮತ್ತು ಗೌರವದಿಂದ ಕಾರ್ಯನಿರ್ವಹಿಸುವ ಸ್ವಾತಂತ್ರ ಹೊಂದಿದ್ದಾಳೆ ಎಂದರು.