ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯ ಸಫಾಯಿ ಕರ್ಮಚಾರಿಗಳು ಹಾಗೂ ಅವರ ಅವಲಂಬಿತ ಕುಟುಂಬಗಳಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ತಲುಪಿಸಲು ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಸೂಚನೆ ನೀಡಿದರು.
ದೇವನಹಳ್ಳಿ ತಾಲೂಕು ಅಂಬೇಡ್ಕರ್ ಭವನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಹಾಗೂ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಮಾಹಿತಿ ಸಂಗ್ರಹಣೆ ಮತ್ತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಇತ್ತೀಚಿಗೆ ನಡೆಸಿದ ಸಮೀಕ್ಷೆಯಂತೆ ಜಿಲ್ಲೆಯಲ್ಲಿ 86 ಸಫಾಯಿ ಕರ್ಮಚಾರಿಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು. ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಫಾಯಿ ಕರ್ಮಚಾರಿಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ನಿವೇಶನ ಹಂಚಿಕೆ, ವಸತಿ ಸೌಲಭ್ಯ, ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ, ಸಾಲ ಸೌಲಭ್ಯ ಇನ್ನು ಮುಂತಾದ ಸರ್ಕಾರದ ವಿವಿಧ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಕರ್ಮಚಾರಿಗಳಿಗೆ ಆದ್ಯತೆ: ಜಿಲ್ಲೆಯಲ್ಲಿ ಈಗಾಗಲೇ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಕಾರ್ಯಕ್ರಮ ರೂಪಿಸಲಾಗಿದ್ದು ನಿವೇಶನ ರಹಿತ ಅರ್ಹ ಸಫಾಯಿ ಕರ್ಮಚಾರಿ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು. ಮನೆ ಇಲ್ಲದವರಿಗೆ ಶೀಘ್ರ ವಸತಿ ಮಂಜೂರಾತಿ ಮಾಡಲು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ವಿವಿಧ ಇಲಾಖೆಗಳಲ್ಲಿ ತರಬೇತಿ ನೀಡುವ ಜತೆಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡಲು ಸಾಲ ಸೌಲಭ್ಯ ನೀಡಲಾಗುವುದು. ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿದ್ದು ಅರ್ಜಿ ಸಲ್ಲಿಸಿದರೆ, ಮೊದಲ ಆದ್ಯತೆಯಾಗಿ ಪರಿಗಣಿಸಿ ಶೀಘ್ರ ಯೋಜನೆಯ ಸೌಲಭ್ಯ ತಲುಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಹೇಳಿದರು.
ಒಂದೇ ಕೆಲಸಕ್ಕೆ ಸೀಮಿತವಾಗಬೇಡಿ: ಸಫಾಯಿ ಕರ್ಮಚಾರಿಗಳು ಒಂದೇ ಕೆಲಸಕ್ಕೆ ಮಾತ್ರ ಸೀಮಿತವಾಗದೆ ಮತ್ತೊಂದು ಕೆಲಸವನ್ನು ಅವಲಂಬಿಸಿ ಜೀವನವನ್ನು ಮತ್ತಷ್ಟು ಅಭಿವೃದ್ಧಿಯತ್ತ ಸಾಗಿಸಲು ಮುಂದಾಗಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಚಂದ್ರಕಲಾ ಸಲಹೆ ನೀಡಿದರು. ಪ್ರಸ್ತುತ ಇಂದು ಎಲ್ಲ ಇಲಾಖೆಗಳಲ್ಲಿ ಇರುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಒಂದೇ ಕಡೆ ಮಳಿಗೆಗಳನ್ನು ನಿರ್ಮಿಸಿ ಈ ಕಾರ್ಯಕ್ರಮವನ್ನು ನಡೆಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 86 ಸಫಾಯಿ ಕರ್ಮಚಾರಿಗಳ ಪೈಕಿ 10 ಮಂದಿ ಮರಣ ಹೊಂದಿದ್ದಾರೆ. ಅದೆಷ್ಟೋ ಸಫಾಯಿ ಕರ್ಮಚಾರಿಗಳಿಗೆ ಇಂದಿಗೂ ಸ್ವಂತ ಮನೆಗಳಿಲ್ಲ ಅವರ ಕುಟುಂಬಗಳಿಗೆ ಮನೆ ಒದಗಿಸಬೇಕು ಎಂದರು. ಕೌಶಲ ಅಭಿವೃದ್ಧಿ ಇಲಾಖೆಯಿಂದ ತರಬೇತಿಗಳನ್ನೂ ನೀಡಲಾಗುತ್ತಿದೆ, ಈ ತರಬೇತಿಯಲ್ಲಿ ಪಾಲ್ಗೊಂಡು ಅದರ ಉಪಯೋಗ ಪಡೆದುಕೊಳ್ಳಬೇಕು. ನರೇಗಾ ಯೋಜನೆ ಕೆಲಸ ಇಲ್ಲದ ನಿರುದ್ಯೋಗಿಗಳಿಗೆ ನೂರು ದಿನಗಳ ಕೆಲಸ ನೀಡಿ ಅದಕ್ಕೆ ಸಂಬಳ ನೀಡುವ ಕಾರ್ಯಕ್ರಮವಿದೆ ಇದರ ಬಗ್ಗೆ ಮಾಹಿತಿ ಪಡೆದು ಎಲ್ಲರೂ ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮಳಿಗೆಗಳ ಮೂಲಕ ಮಾಹಿತಿ: ವೇದಿಕೆ ಕಾರ್ಯಕ್ರಮದ ಜತೆಗೆ ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಮಳಿಗೆಗಳನ್ನು ತೆರೆದು ಸರ್ಕಾರದ ಯೋಜನೆಗಳ ಬಗ್ಗೆ ಸಫಾಯಿ ಕರ್ಮಚಾರಿಗಳಿಗೆ ಮಾಹಿತಿ ನೀಡಲಾಯಿತು.