ಗೋಕಾಕ: ನಗರದಲ್ಲಿ ಕುಂಠಿತಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆ ಸಭಾಭವನದಲ್ಲಿ ಶನಿವಾರ ನಗರಸಭೆ ಅಧಿಕಾರಿಗಳು ಹಾಗೂ 24್ಡ7 ಕುಡಿಯುವ ನೀರಿನ ಯೋಜನಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ನಗರದ ಅಭಿವೃದ್ಧಿಗೆ ಮಾಸ್ಟರ್‌ಪ್ಲ್ಯಾನ್, 2್ಡ7 ಕುಡಿಯುವ ನೀರಿನ ಯೋಜನೆ ಸಮರ್ಪಕ ಕಾರ್ಯನಿರ್ವಹಣೆ ಸೇರಿದಂತೆ ಎಲ್ಲ ಸೌಲಭ್ಯಗಳು ಸಾರ್ವಜನಿಕರಿಗೆ ಸರಿಯಾಗಿ ದೊರಕುವಂತೆ ನೋಡಿಕೊಳ್ಳಬೇಕು. ಕರೊನಾ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಬಾರದು ಎಂದು ಸಾರ್ವಜನಿಕರಿಂದ ಮನವಿ ಬಂದಿವೆ. ಈಗಾಗಲೇ ಕೆಲ ಸ್ಥಳೀಯ ಸಂಸ್ಥೆಗಳಲ್ಲಿ ಕಡಿಮೆ ಮಾಡಲು ತಿಳಿಸಲಾಗಿದೆ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಇಲ್ಲಿಯೂ ಕಡಿಮೆ ಮಾಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕುಡಿಯುವ ನೀರಿನ ಯೋಜನೆಯಲ್ಲಿ ರಾಜಕೀಯ: ನಗರದ ಶೇಕಡಾ 85 ರಷ್ಟು ಜನರಿಗೆ ಅನುಕೂಲವಾಗುವ 24್ಡ7 ಕುಡಿಯುವ ನೀರಿನ ಯೋಜನೆ ವಿಷಯದಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಇದರಿಂದ ಕೆಲವರಿಗೆ ತೊಂದರೆಯಾಗಿರಬಹುದು, ಅದನ್ನೂ ಸರಿಪಡಿಸಲು ಹೇಳಲಾಗಿದೆ. ಉಪಚುನಾವಣೆ ಸಂದರ್ಭದಲ್ಲಿ ಕೆಲ ಅಧಿಕಾರಿಗಳೂ ಒತ್ತಡದಲ್ಲಿ ಕೆಲಸ ಮಾಡಿರಬಹುದು, ಅದೆಲ್ಲ ಈಗ ಸರಿಹೋಗಲಿದೆ ಎಂದು ಪರೋಕ್ಷವಾಗಿ ಸಹೋದರ ಲಖನ್ ಜಾರಕಿಹೊಳಿಗೆ ಪ್ರತ್ಯುತ್ತರ ನೀಡಿದರು.
ಪೌರಾಯುಕ್ತ ಶಿವಾನಂದ ಹಿರೇಮಠ, ಹಿರಿಯ ನಗರಸಭೆ ಸದಸ್ಯ ಎಸ್.ಎ. ಕೊತ್ವಾಲ, ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಆರ್. ಕಾಗಲ ಉಪಸ್ಥಿತರಿದ್ದರು.