ಕೋಲಾರ: ಹಿರಿಯ ಸಂಶೋಧಕ ಚಿದಾನಂದ ಮೂರ್ತಿಯವರ ಕರ್ನಾಟಕ ಸಂಸತಿಯ ಹಿರಿಮೆ&ಗರಿಮೆ ಕೃತಿಯು ಕನ್ನಡದ ಅರಿವಿನ ಪರಿ ವಿಸ್ತರಿಸಿದೆ ಎಂದು ಕನ್ನಡ ಚಿಂತಕ ಹಾಗೂ ಪರಿಚಾರಕ ಕೆ.ರಾಜ್ಕುಮಾರ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಓದುಗ ಕೇಳುಗ ನಮ್ಮ ನಡೆ 49ನೇ ಭಾನುವಾರದ ಕಾರ್ಯಕ್ರಮದಲ್ಲಿ ಚಿದಾನಂದ ಮೂರ್ತಿಯವರ ಕರ್ನಾಟಕ ಸಂಸತಿಯ ಹಿರಿಮೆ&ಗರಿಮೆ ಕೃತಿ ಕುರಿತು ಮಾತನಾಡಿದರು.
ಕನ್ನಡದಲ್ಲಿ ಸುಮಾರು 50ಕ್ಕಿಂತಲೂ ಹೆಚ್ಚು ಬಾರಿ ಮರು ಮುದ್ರಣ ಕಂಡು ದಾಖಲೆ ಬರೆದಿರುವ ಈ ಕೃತಿಯು ಏಳೆಂಟು ವಿವಿಧ ಭಾಷೆಗಳಿಗೂ ತರ್ಜುಮೆಯಾಗಿದೆ. ಕರ್ನಾಟಕ ಕುರಿತಂತೆ ಕನ್ನಡಿಗರು ಮಾತ್ರವಲ್ಲದೆ ಪರಭಾಷಿಕರ ವಾಚನಾಭಿರುಚಿ ಹೆಚ್ಚಿಸಿ ಉದ್ದೀಪಿಸಿ ಪ್ರೇರೇಪಿಸಿದ ಕೃತಿಯಾಗಿದೆ ಎಂದು ವಿವರಿಸಿದರು.
ಚಿದಾನಂದ ಮೂರ್ತಿ ಅವರ ಕೃಷಿ ಎಂದರೆ ಅದರಲ್ಲಿನ ಸಂಶೋಧನಾ ವಿವರಗಳು ಅಕೃತೆಯ ಸಂಕೇತ ಎಂಬಂತೆ ಭಾವಿಸಲಾಗುತ್ತದೆ. ಆಕಾರದಲ್ಲಿ ಲಿಲ್ಲಿಪುಟ್ ಆಗಿದ್ದ ಚಿಮೂ ಸಾಧನೆಯಲ್ಲಿ ಗಲೀವರ ಆಗಿದ್ದರು. ಕರ್ನಾಟಕ ಕುರಿತ ಅವರ ಸಂಶೋಧನೆಯ ಕುರಿತು ಕನ್ನಡ ನಾಡಿಗೆ ಗೌರವವಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡದಲ್ಲಿ ಕಥೆ, ಕವನ, ಕಾದಂಬರಿಗಳನ್ನು ಚಿಮೂ ಬರೆಯದೆ ಇದ್ದರೂ, ಸಂಶೋಧನಾ ವರದಿಗಳನ್ನು ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಇದ್ದಂತೆಯೇ ದಾಖಲಿಸುವ ಮೂಲಕ ಜಾನಪದ ಹಾಗೂ ಸಂಶೋಧನೆಯನ್ನು ತಮ್ಮ ಬರವಣಿಗೆಯ ಕಾರ್ಯಕ್ಷೇತ್ರವಾಗಿಸಿಕೊಂಡಿದ್ದರೆಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಪ್ರಾಧ್ಯಾಪಕ ಡಾ.ಎಸ್. ತ್ಯಾಗರಾಜು ಮಾತನಾಡಿ, ಚಿಮೂ ದೊಡ್ಡ ಸಂಶೋಧಕರಾಗಿದ್ದರೂ ವಿದ್ಯಾರ್ಥಿಗಳ ಮುಂದೆ ಮಗುವಾಗಿರುತ್ತಿದ್ದರು. ಚಿಮೂ ಕುರಿತ ಮಾತು ಎಂದರೆ ಅದು ಕನ್ನಡದ ಕುರಿತ ಮಾತೇ ಆಗಿರುತ್ತದೆ. ಆದರೆ, ಚಿಮೂ ಸಂಶೋಧನೆಗೆ ಕರ್ನಾಟಕದಲ್ಲಿ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ, ವಿದ್ವತ್ ಪರಂಪರೆಯ ಕೊನೆಯ ಕೊಂಡಿಯಾಗಿದ್ದ ಚಿಮೂ ಅವರ ಕನ್ನಡದ ಕನಸುಗಳು ಈಗಲೂ ನನಸಾಗಿಲ್ಲ ಎಂದು ವಿಷಾದಿಸಿದರು.
ಕನ್ನಡ ಪ್ರಾಧ್ಯಾಪಕ ಪ್ರೊ.ಚಂದ್ರಶೇಖರ ನಂಗಲಿ, ಜಿಲ್ಲಾ ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಬಾ.ಹಾ.ಶೇಖರಪ್ಪ, ಓದುಗ ಕೇಳುಗ ಬಳಗದ ಆದಿಮ ಗೋವಿಂದಪ್ಪ, ಎಚ್.ಎ.ಪುರುಷೋತ್ತಮರಾವ್, ಜೆ.ಜಿ.ನಾಗರಾಜ್, ಹ.ಮಾ.ರಾಮಚಂದ್ರ ಸೇರಿದಂತೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.