ಕಡೂರಿನಲ್ಲಿ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ದಂಪತಿಯನ್ನು ಆರ್ಯವೈಶ್ಯ ಸಮಾಜದಿಂದ ಸನ್ಮಾನಿಸಲಾಯಿತು. ನಾಗೇಂದ್ರ ಗುಪ್ತ, ಮಂಜುಳಾ ಚಂದ್ರು, ಶಶಿ ಸಂತೋಷ್, ಭಂಡಿ ರಂಗನಾಥ್, ಶಾಂತಕುಮಾರ್, ಡಿ.ಪ್ರಶಾಂತ್, ಗಿರೀಶ್ ಇತರರಿದ್ದರು. 
ಜಿಲ್ಲೆ

ಇತಿಮಿತಿಯಲ್ಲಿ ಕೆಲಸ ಮಾಡುವೆ

ಎಸ್.ಎನ್.ರವೀಂದ್ರ

ಕಡೂರು: ಆರ್ಯ ವೈಶ್ಯ ಸಮಾಜದ ಯಾವುದೇ ಕೆಲಸವನ್ನು ನನ್ನ ಇತಿಮಿತಿಯಲ್ಲಿ ಮಾಡಿಕೊಡುತ್ತೇನೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಭರವಸೆ ನೀಡಿದರು.

ಶುಕ್ರವಾರ ಆರ್ಯವೈಶ್ಯ ಸಮಾಜದಿಂದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಈ ಹಿಂದೆ ಆರ್ಯವೈಶ್ಯ ಸಮುದಾಯದ ಹಲವರು ಪುರಸಭೆಗೆ ಆಯ್ಕೆಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ವ್ಯಾಪಾರದಲ್ಲಿ ತೊಡಗಿಸಿಕೊಂಡ ಯುವಕರು ಪೈಪೋಟಿ ಯುಗದಲ್ಲಿ ಕೆಲಸಕ್ಕಾಗಿ ದೂರದ ದೇಶಗಳಿಗೆ ಹೋಗುತ್ತಿದ್ದಾರೆ. ಸಮಾಜದ ಯುವಕರು ರಾಜಕೀಯಕ್ಕೆ ಪ್ರವೇಶಿಸಬೇಕು ಎಂದರು.
ಆರ್ಯ ವೈಶ್ಯ ಸಂಘದ ಅಧ್ಯಕ್ಷ ನಾಗೇಂದ್ರ ಗುಪ್ತ ಮಾತನಾಡಿ, ಸಮಾಜದ ಯುವಕರು ಕೆಲಸದೊಂದಿಗೆ ರಾಜಕೀಯವಾಗಿಯೂ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಡೂರಿನ ಆರ್ಯ ವೈಶ್ಯ ಸಮುದಾಯದ ಹಲವರು ಸ್ವಾತಂತ್ರೃ ಹೋರಾಟದಲ್ಲಿ ಭಾಗವಹಿಸಿದ್ದರು. ಅವರು ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯದೆ ಜೀವನ ನಡೆಸಿದ್ದರು. ಪಟ್ಟಣದ ಯಾವುದಾದರೂ ಬಡಾವಣೆಗೆ ಅಥವಾ ರಸ್ತೆಗಳಿಗೆ ಅವರ ಹೆರನ್ನು ನಾಮಕರಣ ಮಾಡಬೇಕು ಎಂದು ಮನವಿ ಮಾಡಿದರು.
ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಆರ್ಯ ವೈಶ್ಯ ಸಮಾಜದ ಹಿರಿಯ ಮುಖಂಡ ತ್ಯಾಗರಾಜ್ ಅವರನ್ನು ಸನ್ಮಾನಿಸಲಾಯಿತು. ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಶಶಿ ಸಂತೋಷ್, ಸಮಾಜದ ಮುಖಂಡರಾದ ಭಂಡಿ ರಂಗನಾಥ್, ಶಾಂತಕುಮಾರ್, ಡಿ.ಪ್ರಶಾಂತ್, ಗಿರೀಶ್, ರಮೇಶ್, ಮಂಜುನಾಥ್, ಬಾಬಣ್ಣ ಇತರರಿದ್ದರು.