ಬೇಲೂರು: ರೋಟರಿ ಸಂಸ್ಥೆ ಮೊದಲಿನಿಂದಲೂ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರೊಂದಿಗೆ, 35 ವರ್ಷಗಳಿಂದ ಪೋಲಿಯೋ ನಿರ್ಮೂಲನೆಗಾಗಿ ನಿರಂತರವಾಗಿ ಕೈಗೊಂಡ ಕೆಲಸಕ್ಕೆ ದೇಶ, ವಿದೇಶಗಳಲ್ಲೂ ಪ್ರಶಂಸೆಗೆ ವ್ಯಕ್ತವಾಗಿದೆ ಎಂದು ರೋಟರಿ ಜಿಲ್ಲಾ ಪ್ರಾಂತಪಾಲ ಸಿ.ಎ.ದೇವ್‌ಆನಂದ್ ಹೇಳಿದರು.
ಪಟ್ಟಣ ಸಮೀಪದ ವಿ.ಆರ್. ಕನ್ವೆನ್ಸನ್ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ರೋಟರಿ ಜಿಲ್ಲಾ ಪ್ರಾಂತಪಾಲ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಟರಿ ಸಂಸ್ಥೆ 120 ವಸಂತವನ್ನು ಯಶಸ್ವಿಯಾಗಿ ಮುಗಿಸಿದೆ. ಪೋಲಿಯೋ ನಿರ್ಮೂಲನೆಗಾಗಿ ನಿರಂತರವಾಗಿ ಕೆಲಸ ಮಾಡುತ್ತ ಲಸಿಕೆಗೆ ತಗಲುವ ವೆಚ್ಚವನ್ನು ಭಾರತೀಯ ರೋಟೇರಿಯನ್‌ಗಳು ದೇಣಿಗೆ ನೀಡಿ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯಿಂದ ಸಾಮಾನ್ಯ ಶಾಲೆಯನ್ನು ಹ್ಯಾಪಿ ಸ್ಕೂಲ್ ಆಗಿ ಪರಿವರ್ತಿಸಿ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ವಿಜ್ಞಾನ ಶಾಸ್ತ್ರದಂತೆ ಗಣಿತ ಶಾಸ್ತ್ರಕ್ಕೂ ಲ್ಯಾಬ್ ಒದಗಿಸಿ ವಿದ್ಯಾರ್ಥಿಗಳಿಗೆ ಗಣಿತದ ಬಗ್ಗೆ ಸುಲಭವಾಗಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಗರಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳ ಜತೆ ಕೈಜೋಡಿಸುವ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರವಾಸಿ ಕೇಂದ್ರವಾದ ಬೇಲೂರಿನಲ್ಲಿ ತ್ಯಾಜ್ಯ ವಸ್ತುಗಳ ನಿರ್ವಹಣೆ ಸುಲಭವಾಗಲು ಮೂರು ಪ್ರಮುಖ ಸ್ಥಳಗಳಲ್ಲಿ ಕಸದ ತೊಟ್ಟಿ ಇಡಲು ಪುರಸಭೆಗೆ ಕೊಡುಗೆ ನೀಡಿದ್ದೇವೆ. ಶಾಲೆ ಹಾಗೂ ಜನದಟ್ಟಣೆ ಇರುವ ರಸ್ತೆಗಳಲ್ಲಿ ವಾಹನ ಸವಾರರಿಗೆ ಅಪಘಾತ ವಲಯದ ಬಗ್ಗೆ ಸೂಚನಾ ಫಲಕ, ಚನ್ನಕೇಶವ ದೇಗುಲಕ್ಕೆ ಬರುವ ಪ್ರವಾಸಿಗರಿಗೆ ಸ್ವಾಗತ ಕಮಾನು, ನಗರ ಸುಂದರವಾಗಿರಲೆಂದು ಹಸಿರು ಗಿಡಗಳನ್ನು ನೆಡುವುದು, ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಸಲು ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರ, ಯುವಕರಿಗೆ ನಾಯಕತ್ವದ ಗುಣ ರೂಪಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಿ ಆತ್ಮಸ್ಥೈರ್ಯ ತುಂಬುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸುಧಾ, ಸೆಸ್ಕ್‌ನ ಮಲ್ಲಿಕಾರ್ಜುನ್, ಸೇರಿದಂತೆ ಮೂವರು ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷ ಎನ್.ಶಂಭುಗೌಡ, ಸಹಾಯಕ ಪ್ರಾಂತಪಾಲ ಅರುಣ್ ರಕ್ಷಿದ್, ಜೋನಲ್ ಲೆಫ್ಟ್ನೆಂಟ್ ಲೋಕೇಶ್, ಪ್ರದಾನ ಕಾರ್ಯದರ್ಶಿ ಶಿವರಾಜ್, ಸಂಸ್ಥೆಯ ಗಣೇಶ್, ಲೋಕೇಶ್, ಮುರುಳಿ, ರಮೇಶ್ ಸೇರಿದಂತೆ ಇತರರಿದ್ದರು.