ಕಂಪ್ಲಿಯಲ್ಲಿ ಸಿಐಟಿಯು ತಾಲೂಕು ಜಂಟಿ ಸಮಿತಿ ಪದಾಧಿಕಾರಿಗಳ ಸಂಘಟನೆ ಸಭೆಯಲ್ಲಿ ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ ಮಾತನಾಡಿದರು. ಪದಾಧಿಕಾರಿಗಳಾದ ಬಂಡಿ ಬಸವರಾಜ, ವಸಂತರಾಜ ಕಹಳೆ, ಐ.ಹೊನ್ನೂರುಸಾಬ್, ನಾಗರಾಜ, ಎ.ಎಸ್.ಯಲ್ಲಪ್ಪ ಇತರರಿದ್ದರು. 
ಜಿಲ್ಲೆ

ಕಾರ್ಮಿಕರ ಪ್ರತಿಭಟನಾ ಮೆರವಣಿಗೆ ನಾಳೆ

ರುದ್ರಪ್ಪ ವಾಲಿ

ಕಂಪ್ಲಿ: ದೇಶದಲ್ಲಿನ ಅಸಂಘಟಿತ, ಸ್ತ್ರೀ, ಅನೌಪಚಾರಿಕ ಕಾರ್ಮಿಕರನ್ನು ಕಾನೂನುಗಳಡಿ ತರಬೇಕೆನ್ನುವ ಕೇಂದ್ರ ಕಾರ್ಮಿಕರ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದನ್ನು ಖಂಡಿಸಿ ಜು.9ರಂದು ಮುಷ್ಕರ ಹಮ್ಮಿಕೊಳ್ಳುವ ಹಿನ್ನೆಲೆಯಲ್ಲಿ ಇಲ್ಲಿನ ಅತಿಥಿಗೃಹ ಆವರಣದಲ್ಲಿ ಸೋಮವಾರ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಸಿಐಟಿಯು ತಾಲೂಕು ಜಂಟಿ ಸಮಿತಿ ಪದಾಧಿಕಾರಿಗಳ ಸಂಘಟನಾ ಸಭೆ ನಡೆಯಿತು.

ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ ಮಾತನಾಡಿ, ಕೇಂದ್ರ ಸರ್ಕಾರ ವೇತನ ಸಂಹಿತೆಯಲ್ಲಿ 4, ಕೈಗಾರಿಕಾ ಸಂಹಿತೆಯಡಿ 3, ಔದ್ಯೋಗಿಕ ಸುರಕ್ಷತೆ, ಆರೋಗ್ಯದಡಿ 13, ಸಾಮಾಜಿಕ ಭದ್ರತಾ ಸಂಹಿತೆಯಡಿ 9 ಸೇರಿ ಒಟ್ಟು 29ಕಾನೂನುಗಳನ್ನು ನಾಲ್ಕು ಸಂಹಿತೆಗಳಲ್ಲಿ ತಿದ್ದುಪಡಿಗೆ ರೂಪಿಸಲಾಗಿದ್ದು ಈ ಎಲ್ಲ ಕಾನೂನುಗಳು ಅಸಂಘಟಿತ, ಸ್ತ್ರೀ ಮತ್ತು ಅನೌಪಚಾರಿಕ ಕಾರ್ಮಿಕರ ಹಿತಾಸಕ್ತಿಯನ್ನು ಕಡೆಗಣಿಸಿವೆ. ದಿನಕ್ಕೆ 600ರೂ.ವೇತನ ನಿಗದಿ ತಿರಸ್ಕರಿಸಿದೆ. ಯಾವಾಗ ಬೇಕಾದರೂ ಕಾರ್ಖಾನೆ ತೆರೆದು ಮುಚ್ಚುವ ಕಾನೂನು ಕಾರ್ಮಿಕರಿಗೆ ಮಾರಕವಾಗಿವೆ.

ರೈತರ ಬೆಂಬಲ ಬೆಲೆ ಖಾತ್ರಿ, ಬಲವಂತದ ಭೂಸ್ವಾಧೀನ ವಿರೋಧಿಸಿ ಜು.9ರಂದು ನಡೆವ ಅಖಿಲ ಭಾರತ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ, ಇಲ್ಲಿನ ಉದ್ಭವ ಮಹಾಗಣಪತಿಗುಡಿಯಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು, ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಿದೆ. ತಾಲೂಕಿನ ಎಲ್ಲ ರೈತ, ದಲಿತ, ಕಾರ್ಮಿಕ, ದೇವದಾಸಿ ಸಂಘಟನೆಗಳು ಸೇರಿ ಜನಪರ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಕೋರಿದರು.

ಪದಾಧಿಕಾರಿಗಳಾದ ಎಚ್.ಮರಿಸ್ವಾಮಿ, ಎಸ್.ಬಸವರಾಜ, ಎಂ.ಅಂಕಲೇಶ, ಟಿ.ಅನುರಾಧ, ಎಸ್.ತಿಪ್ಪಮ್ಮ ಇತರರಿದ್ದರು.