ಅರಕಲಗೂಡು: ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕಟ್ಟಡ ಕಾರ್ಮಿಕರ ಸಹಯೋಗದಲ್ಲಿ ತಾಲೂಕಿನ ತಾಲೂಕಿನ ರಾಮನಾಥಪುರ ಶ್ರೀ ಸುಬ್ರಹ್ಮಣ್ಯ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಸಭಾಂಗಣದಲ್ಲಿ ಬುಧವಾರ ಕಾರ್ಮಿಕರ ದಿನ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಆರ್.ಎಂ. ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರಮಜೀವಿಗಳಾದ ಕಾರ್ಮಿಕರಿಗೆ, ಸರ್ಕಾರಗಳು ಮತ್ತಷ್ಟು ಸವಲತ್ತುಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಆಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, 12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ಕಾಯಕ ಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದ್ದರು. ವಿವಿಧ ಶರಣ ಮಹಿಳೆಯರಿಗೆ ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಸಮಾನತೆಯ ಸೌಭಾಗ್ಯ ಕರುಣಿಸಿ, ಸಾಹಿತ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಉತ್ತಮ ಕಾಯಕದ ವ್ಯವಸ್ಥೆಗೆ ಕಾರಣರಾದರು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಬಿ.ವಿ. ಲೋಕೇಶ್, ಕಾರ್ಯದರ್ಶಿ ಅರ್.ಎಸ್. ನಾಗೇಂದ್ರ, ಸಹ ಕಾರ್ಯದರ್ಶಿ ಅಶೋಕ್, ಸದಸ್ಯ ಮೋಹನ್ ಕುಮಾರ್ ಇತರರಿದ್ದರು.