ಕೊಪ್ಪಳ: ಕೊಪ್ಪಳ ವಿಧಾನಸಭೆ ಟಿಕೆಟ್ ನನಗೆ ನೀಡಬೇಕು. ರಾಜ್ಯ ನಾಯಕರು ಒಂದು ದಿನ ಕಾಯುವಂತೆ ಮನವಿ ಮಾಡಿದ್ದಾರೆ. ಅಷ್ಟರಲ್ಲಿ ಹೈಕಮಾಂಡ್ ಮನವೊಲಿಸಿ ಟಿಕೆಟ್ ಕೊಡಿಸುವುದಾಗಿ ಹೇಳಿದ್ದಾರೆ. ಇಲ್ಲದಿದ್ದರೆ ಕಾರ್ಯಕರ್ತರು, ಅಭಿಮಾನಿಗಳ ಇಚ್ಛೆಯಂತೆ ಜೆಡಿಎಸ್ ಅಥವಾ ಪಕ್ಷೇತರವಾಗಿ ಕಣ್ಣಕ್ಕಿಳಿಯುವ ಬಗ್ಗೆ ಇನ್ನೊಮ್ಮೆ ಚರ್ಚಿಸಿ ಮುಂದಿನ ನಡೆ ನಿರ್ಧರಿಸುವೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ಪ್ರಮೋದ ಕಲ್ಯಾಣ ಮಂಟಪದಲ್ಲಿ ಭಾನುವಾರ ಬೆಂಬಲಿಗರು, ಹಿತೈಷಿಗಳು ಮತ್ತು ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ನನ್ನನ್ನು ತಾಲೂಕು ಬೋರ್ಡ್‌ನಿಂದ ಸಂಸದನವರೆಗೆ ಬೆಳೆಸಿದ್ದೀರಿ. ನಾಲ್ಕು ಬಾರಿ ಶಾಸಕ, ಎರಡು ಬಾರಿ ಸಂಸದನಾಗಿರುವೆ.
ನಾನೇನು ಟಿಕೆಟ್ ಕೇಳಿರಲಿಲ್ಲ. ಆದರೆ, ಜನಾಭಿಪ್ರಾಯ ಹಾಗೂ ಇತರ ಅಭ್ಯರ್ಥಿಗಳಾದ ದೊಡ್ಡನಗೌಡ, ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು ಇನ್ನಿತರರು ನನಗೆ ಟಿಕೆಟ್ ನೀಡಿದಲ್ಲಿ ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂದರು. ಜಿಲ್ಲಾಮಟ್ಟದ ಸಭೆಯಲ್ಲಿ ಸಿವಿಸಿ, ಗವಿಸಿದ್ದಪ್ಪ ಕರಡಿ ಹೆಸರಿತ್ತು. ನಾನು ನನ್ನ ಕುಟುಂಬದವರಾರು ಸ್ಪರ್ಧಿಸುವುದಿಲ್ಲ ಎಂದೆ. ನಂತರ ರಾಜಶೇಖರ್ ಆಡೂರು, ನನ್ನ ಹೆಸರು ಸೇರಿಸಿ ಕಳಿಸಲಾಯಿತು.
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ರಾಜ್ಯ ಉಸ್ತುವಾರಿ ಅರುಣ ಸಿಂಗ್, ಪ್ರಹ್ಲಾದ ಜೋಶಿ, ಆರ್.ಅಶೋಕ್, ಶಿವಕುಮಾರ ಉದಾಸಿ ಇದ್ದರು. ಅಲ್ಲಿಯೂ ನನಗೆ ಟಿಕೆಟ್ ನೀಡಿದರೆ, ಇತರ ಕ್ಷೇತ್ರಗಳ ಗೆಲುವಿಗೆ ಅನುಕೂಲವಾಗಲಿದೆ ಎಂದ ಎಲ್ಲ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಧರ್ಮೇಂದ್ರ ಪ್ರಧಾನ ನೇತೃತ್ವದಲ್ಲಿ ಸಭೆ ನಡೆಸಿದರು. ನಾನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷಗೆ ಕರೆ ಮಾಡಿದಾಗ, ಅವರು ಸಂಸದರಿಗೆ ಹಾಗೂ ಅವರ ಕುಟುಂಬದವರಿಗೆ ಟಿಕೆಟ್ ಇಲ್ಲವೆಂದರು. ಬದಲಿಗೆ ಪಂಚಮಸಾಲಿ ಸಮುದಾಯದವರಿಗೆ ಕೊಡುವುದಾಗಿ ತಿಳಿಸಿದರು.
ಆದರೆ, ಯಾರನ್ನಾದರೂ ಸೂಚಿಸಿ ಎಂದಿದ್ದರೆ ಖುಷಿ ಪಡುತ್ತಿದ್ದೆ. ಅದರ ಬದಲು ನಮ್ಮ ಸಮುದಾಯದ ಶಿವರಾಮಗೌಡ, ಬಸವರಾಜ ಇತರರನ್ನು ಸಂಪರ್ಕಿಸುವ ಮೂಲಕ ಸಮುದಾಯದಲ್ಲಿ ನನ್ನನ್ನು ವಿಲನ್ ಮಾಡಿರುವುದು ನೋವುಂಟು ಮಾಡಿದೆ. ಈಗಲೂ ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷರು ಹಾಗೂ ಬಿಎಸ್‌ವೈ ಕರೆ ಮಾಡಿ ದುಡುಕದಂತೆ ಮನವಿ ಮಾಡಿದ್ದಾರೆ. ಒಂದು ದಿನ ಕಾಯಲು ತಿಳಿಸಿದ್ದಾರೆ.
ಟಿಕೆಟ್ ನೀಡಿದರೆ ಇಲ್ಲಿಂದಲೇ ಅಭಿನಂದಿಸುವೆ. ಇಲ್ಲದಿದ್ದರೆ ಕಾರ್ಯಕರ್ತರ ಒತ್ತಾಸೆಯಂತೆ ಯಾವ ಪಕ್ಷ ಸೇರಬೇಕು ಅಥವಾ ಪಕ್ಷೇತರನಾಗಿ ಸ್ಪರ್ಧಿಸಬೇಕೆ ಎಂಬ ಬಗ್ಗೆ ನಿರ್ಧರಿಸುವೆ ಎಂದು ಬಾಂಬ್ ಸಿಡಿಸಿದರು. ನಾನು ಬಿಜೆಪಿ, ಜೆಡಿಎಸ್ ಅಥವಾ ಪಕ್ಷೇತರನಾಗಿ ಸ್ಪರ್ಧಿಸಿದರೂ ನೀವು ನನ್ನನ್ನು ಗೆಲ್ಲಿಸುತ್ತೀರಿ. ನಾನು ಕೇವಲ ಪಂಚಮಸಾಲಿ ನಾಯಕನಲ್ಲ. ಎಲ್ಲ ಸಮುದಾಯದ ಪ್ರತಿನಿಧಿ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಬೇಡಿ. ಪಕ್ಷ ನನಗೆ ಎಲ್ಲವನ್ನು ನೀಡಿದೆ.
ಕ್ಷೇತ್ರದ ಕಾರ್ಯಕರ್ತರ ನೋವು, ಅಭಿವೃದ್ಧಿ ವಿಷಯಗಳಿಗಾಗಿ ಶಾಸಕನಾಗಬೇಕೆಂದು ಬಯಸಿರುವೆ. ಬಿಜೆಪಿ ಟಿಕೆಟ್ ಸಿಕ್ಕರೆ ಕೊಪ್ಪಳದೊಂದಿಗೆ ಇತರ ಕ್ಷೇತ್ರಗಳನ್ನೂ ಗೆಲ್ಲಿಸುವೆ ಎಂದರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಹಾಂತೇಶ ಮೈನಳ್ಳಿ ಮತ್ತು ಇತರ ಸಮುದಾಯಗಳ ನಾಯಕರು ಅಭಿಪ್ರಾಯ ಹಂಚಿಕೊಂಡರು.
ಜಿಲ್ಲೆಯ ಇತರ ಕ್ಷೇತ್ರಗಳ ಅಭ್ಯರ್ಥಿಗಳು ನನಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಇದರಿಂದ ಐದು ಕ್ಷೇತ್ರ ಗೆಲ್ಲಿಸಲು ಅನುಕೂಲವಾಗಲಿದೆ. ಸಿವಿಸಿ ನನಗೆ ಕರೆ ಮಾಡಿ ತಮ್ಮ ಹೆಸರು ಸೂಚಿಸಲು ಕೇಳಿದರು. ಆದರೆ, ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಲು ಪಕ್ಷ ನಿರ್ಧರಿಸಿದೆ. ಹಾಗೊಮ್ಮೆ ಬೇರೆಯವರ ಹೆಸರು ಸೂಚಿಸಲು ಕೇಳಿದ್ದರೆ ಮಹಾಂತೇಶ ಮೈನಳ್ಳಿ ಹೆಸರು ಹೇಳುತ್ತಿದ್ದೆ. ನಿನ್ನ ಹೆಸರು ಸೂಚಿಸುವುದಿಲ್ಲವೆಂದು ತಿಳಿಸಿರುವೆ. ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಅವರನ್ನು ಕಡೆಗಣಿಸಿದ್ದು ಸರಿಯಲ್ಲ.ಸಂಗಣ್ಣ ಕರಡಿ, ಸಂಸದ ಕೊಪ್ಪಳ