ಬೂತ್‌ಮಟ್ಟದ ಕಾರ್ಯಕರ್ತರ ಸಭೆ 
ಜಿಲ್ಲೆ

ಗ್ಯಾರಂಟಿ ಯೋಜನೆ ಯಶಸ್ವಿ

ಶಿವರಾಜ.ಎಂ

*ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಕುಂದಾಣ
ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಭದ್ರವಾಗಿ ಬೇರೂರಿದ್ದ ಜೆಡಿಎಸ್ ಕಿತ್ತೆಸೆದು, ಕೇವಲ ಹತ್ತು ದಿನದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಂತಹ ಕಾರ್ಯಕರ್ತರಿಗೆ ಮೊದಲು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ದೇವನಹಳ್ಳಿ ತಾಲೂಕಿನ ಕಾರಹಳ್ಳಿ, ಕುಂದಾಣ, ಆಲೂರು ದುದ್ದನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಬೂತ್‌ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಪ್ರತಿ ಮನೆ-ಮನೆಗೆ ಗ್ಯಾರಂಟಿ ಯೋಜನೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಕಾಂಗ್ರೆಸ್ ಮಹಿಳಾ ಘಟಕ, ಮಹಿಳೆಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಪಕ್ಷದ ಅಭ್ಯರ್ಥಿ ಪರ ಮತ ಯಾಚಿಸಬೇಕು. ತಾಲೂಕಿನಲ್ಲಿ ರಸ್ತೆಗಳನ್ನು ಸರಿಪಡಿಸುವಲ್ಲಿ ವಿಳಂಬವಾಗಿದೆ. ಚುನಾವಣೆ ಮುಗಿದ ನಂತರ ಆದಷ್ಟು ತುರ್ತಾಗಿ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾರಹಳ್ಳಿ ಪಂಚಾಯಿತಿಯಿಂದ ಕಾಂಗ್ರೆಸ್ ಪರವಾಗಿ ಮತಗಳಿಕೆಗೆ ಹಿನ್ನಡೆಯಾಗಿದೆ ಎಂದರು.
ಪಂಚಾಯಿತಿಯ ಗ್ರಾಮಸ್ಥರ ಯಾವುದೇ ಸಮಸ್ಯೆ ಇದ್ದರೂ ಸರಿಪಡಿಸುವ ಜವಾಬ್ದಾರಿ ನನಗಿರಲಿ. ಮತಗಳಿಕೆಯಲ್ಲಿ ಹಿಂದುಳಿದ ಪಂಚಾಯಿತಿಗಳಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಶ್ರಮಿಸಿದರೆ, ಮೈತ್ರಿ ಪಕ್ಷಗಳನ್ನು ಈ ಚುನಾವಣೆಯಲ್ಲಿ ಸದೆಬಡಿಯಬಹುದಾಗಿದೆ ಎಂದರು.
ಮುಖಂಡರಾದ ಎಸ್.ಆರ್.ರವಿಕುಮಾರ್, ಬಿದಲೂರು ಮುನಿರಾಜು, ಜಯರಾಮೇಗೌಡ, ಲಕ್ಷ್ಮೀಕಾಂತ್, ಮುನಿ ಆಂಜಿನಪ್ಪ, ಕಾರಹಳ್ಳಿ ಲಕ್ಷ್ಮೇಗೌಡ, ಅಶೋಕ್, ಕೇಶವ, ಕೆಂಪಣ್ಣ, ಅರುವನಹಳ್ಳಿ ಸುಬ್ಬೇಗೌಡ, ಜಗದೀಶ್, ಅಂಜನ್‌ಗೌಡ ಇದ್ದರು.