ವಿಜಯವಾಣಿ ಸುದ್ದಿಜಾಲ ಕುಂದಾಣ
ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಯಾರೇ ಆಗಿರಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ವಿಶ್ವಾಸ ಕಾರ್ಯಕರ್ತರಲ್ಲಿ ಹೆಚ್ಚಾಗಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ಉಸ್ತುವಾರಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದರು.
ಹೋಬಳಿಯ ಕೊಯಿರಾ ಗ್ರಾಮದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಬಿಟ್ಟಿ ಭಾಗ್ಯಗಳಿಗೆ ಜನತೆ ಕಿಮತ್ತು ನೀಡುತ್ತಿಲ್ಲ, ಈಗಾಗಲೇ ಜನರಿಗೆ ಕಾಂಗ್ರೆಸ್‌ನ ಬಂಡವಾಳ ಗೊತ್ತಾಗಿದೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಬಯಲು ಸೀಮೆ ಪ್ರದೇಶಗಳ ನೀರಾವರಿ ಯೋಜನೆಯನ್ನು ಕಾಂಗ್ರೆಸ್ ನಾಯಕರು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ದೂರಿದರು.
ಪಕ್ಷದ ಕಾರ್ಯಕರ್ತರು ಬೂತ್‌ಮಟ್ಟದಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಗಳ ಕುರಿತು ಅರಿವು ಮೂಡಿಸಲಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹೆಸರು ಅಂತಿಮಗೊಳಿಸಲು ರಾಜ್ಯಾಧ್ಯಕ್ಷರು ಸಭೆ ಕರೆದು ಅಭಿಪ್ರಾಯ ಪಡೆಯುತ್ತಿದ್ದಾರೆ. ಪಕ್ಷದಲ್ಲಿ ಸಾಮಥ್ಯ ಮತ್ತು ಪ್ರಬಲವಾಗಿದ್ದವರನ್ನು ಗುರುತಿಸಿ ಟಿಕೆಟ್ ನೀಡಲಿದ್ದಾರೆ. ಅದರ ಕುರಿತು ಯಾವುದೇ ಭಿನ್ನಾಭಿಪ್ರಾಯವಿಲ್ಲ. ಜನತೆಯ ಸೇವೆ ಮಾಡುವ ಯಾರೇ ಅಭ್ಯರ್ಥಿಯಾಗಲಿ ಅವರ ಪರ ಕೆಲಸ ಮಾಡಲಿದ್ದೇವೆ ಎಂದರು.