ಆನವೇರಿಯಲ್ಲಿ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್ಸ್‌ ಸೆಂಟರ್ ಯೂನಿಯನ್ ಗ್ರಾಮಾಂತರ ಘಟಕವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಿದರು. ಶಾರದಾ ಪೂರ‌್ಯಾನಾಯ್ಕಾ, ಎಸ್.ರುದ್ರೇಗೌಡ, ಟಿ.ಕುಬೇಂದ್ರಪ್ಪ, ನಟರಾಜಪ್ಪ ಗೌಡ ಇತರರಿದ್ದರು. 
ಜಿಲ್ಲೆ

ಮಧ್ಯವರ್ತಿಗಳಿಂದ ಕಾರ್ಮಿಕರ ಕಾರ್ಡ್ ಅನರ್ಹರ ಜೇಬಿಗೆ

ಹೊಳೆಹೊನ್ನೂರು: ಕಟ್ಟಡ ಕಾರ್ಮಿಕರು ಸ್ವಂತ ಬಲ ಹಾಗೂ ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಆನವೇರಿಯಲ್ಲಿ ಭಾನುವಾರ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್ಸ್‌ ಸೆಂಟರ್ ಯೂನಿಯನ್ ಅಡಿಯಲ್ಲಿ ಗ್ರಾಮಾಂತರ ವಿಭಾಗದ ಘಟಕ ಹಾಗೂ ಉಚಿತ ಸಂಚಾರಿ ಚಿಕಿತ್ಸಾಲಯ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರಿಗೆ ಸಿಗಬೇಕಾದ ವೈಯಕ್ತಿಕ ಲಾಭಗಳು ಉಳ್ಳವರ ಪಾಲಾಗುತ್ತಿರುವುದು ನೋವಿನ ಸಂಗತಿ. ಕಾರ್ಮಿಕ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ ಕಾಡುತ್ತಿದೆ. ಒಬ್ಬ ಅಧಿಕಾರಿ ಎರಡ್ಮೂರು ಜಿಲ್ಲೆಗಳ ಉಸ್ತುವಾರಿ ನೋಡಿಕೊಳ್ಳಬೇಕಾಗಿದೆ. ಮಧ್ಯವರ್ತಿಗಳಿಂದ ಕೂಲಿ ಕಾರ್ಡ್‌ಗಳು ಅರ್ಹ ಪಲಾನುಭವಿಗೆ ಲಭಿಸುತ್ತಿಲ್ಲ ಎನ್ನುವ ಕೂಗು ಕೇಳಿಬರುತ್ತಿದೆ. ಘಟಕಗಳು ಹೆಚ್ಚಾದರೆ ಅರ್ಹರಿಗೆ ಇಲಾಖೆಯ ಲಾಭಗಳು ಸಿಗುವುದರಲ್ಲಿ ಎರಡು ಮಾತಿಲ್ಲ. ಇ-ಶ್ರಮ ಕಾರ್ಡ್ ದುರ್ಬಳಕೆಯಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳು ಪಿಎಂ ಸ್ವ ನಿಧಿ ಯೋಜನೆ ಲಾಭ ಪಡೆದುಕೊಳ್ಳಬೇಕು. ಕಾರ್ಮಿಕ ಇಲಾಖೆಯ ಜನಪರ ಯೋಜನೆಗಳ ಲಾಭಗಳು ಮಧ್ಯವರ್ತಿಗಳ ಹಾವಳಿಯಿಂದ ಅರ್ಹರಿಗೆ ಸಿಗುತ್ತಿಲ್ಲ ಎಂದರು.
ಆನವೇರಿಯಲ್ಲಿ ಒಂದು ಜನರಿಕ್ ಔಷಧ ಮಾರಾಟ ಮಳಿಗೆ ತೆರೆಯಲು ಅವಕಾಶವಿದೆ. ಭದ್ರಾವತಿಯಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಕಾರ್ಮಿಕ ಕಲ್ಯಾಣ ಮಂಟಪ ನಿರ್ಮಾಣವಾಗುತ್ತಿದೆ. ಅನ್ಯ ರಾಜ್ಯಗಳ ವಲಸೆ ಕಾರ್ಮಿಕರು ತಂಗಲು 100 ಕೋಟಿ ರೂ. ವೆಚ್ಚದಲ್ಲಿ ದೇವಕಾತಿಕೊಪ್ಪದಲ್ಲಿ ಸುಸಜ್ಜಿತ ಬಹುಮಳಿಗೆಯ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ರಾಗಿಗುಡ್ಡದಲ್ಲಿ 100 ಹಾಸಿಗೆ ಸಾರ್ಮಥ್ಯದ ಇಎಸ್‌ಐ ಆಸ್ಪತ್ರೆ ನಿರ್ಮಾಣ ಹಂತದಲ್ಲಿದೆ. ಆನವೇರಿಯ ಹಿರಿಮಾವುರದಮ್ಮ ದೇವಸ್ಥಾನದ ಬಳಿ 6 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಎಂಎಲ್‌ಸಿ ರುದ್ರೇಗೌಡ ಮಾತನಾಡಿ, ಕಾರ್ಮಿಕ ಸಂಘಟನೆಗಳು ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಅನುವು ಮತ್ತು ಆಪತ್ತುಗಳಲ್ಲಿ ಸರ್ಕಾರ ನೀಡುವ ಸಹಾಯಧನಗಳು ಕೈಹಿಡಿಯುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ನೋಂದಣಿ ಮಾಡಿಕೊಂಡು ಕಲ್ಯಾಣ ನಿಧಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಿಂದಿನಿಂದಲೂ ಕಟ್ಟಡ ಕಾರ್ಮಿಕರು ಇಂಜಿನಿಯರ್‌ಗಳು ನಾಚುವಂತೆ ಕಟ್ಟಡ ನಿರ್ಮಿಸಿದ ನಿದರ್ಶನಗಳಿವೆ. ಕಾರ್ಮಿಕರಿಗೆ ಕೌಶಲಾಭಿವೃದ್ಧಿಯ ಅವಶ್ಯಕತೆ ಇದೆ. ಕಾಲಕ್ಕೆ ತಕ್ಕಂತೆ ಸುಧಾರಿತ ಯಂತ್ರೋಪಕರಣಗಳನ್ನು ಬಳಸಿಕೊಂಡು ಕಲಾ ನೈಪುಣ್ಯ ಸಂಪಾದಿಸಬೇಕು ಎಂದರು.
ಘಟಕದ ಅಧ್ಯಕ್ಷ ಟಿ.ಕುಬೇಂದ್ರಪ್ಪ, ಗ್ರಾಪಂ ಅಧ್ಯಕ್ಷ ನಟರಾಜಪ್ಪ ಗೌಡ, ಸಹಕಾರ ಸಂಘದ ಅಧ್ಯಕ್ಷ ಎಂ.ಜಿ.ನಾಗರಾಜ್, ಪ್ರಮುಖರಾದ ಸುಂದರ್‌ಬಾಬು, ಸಂಜಯ್‌ಕುಮಾರ್, ಎ.ಜಿ.ಚನ್ನಬಸಪ್ಪ, ಜಗದೀಶಪ್ಪ ಗೌಡ, ಈಶಪ್ಪ ಗೌಡ, ಜಿ.ಬಿ.ಸುರೇಶ್ ಗೌಡ, ಎ.ಜಿ.ವಿಜಯ್ ಗೌಡ, ಹನುಮಂತಪ್ಪ ಬೋವಿ, ಶ್ರೀನಿವಾಸ್, ತಿಪ್ಪೇಶ್, ಮುರಾರಿ, ನಂದೀಶ್, ಸುಜಾತಾ, ತೇಜಾವತಿ, ಮಮತಾ, ಶೋಭಾ, ಲಲಿತಾ, ರೇಣುಕಮ್ಮ, ಸೈಯದ್ ಸೀಮಾ, ಶಂಕರಮೂರ್ತಿ, ಮಂಜುನಾಥ್ ಇತರರಿದ್ದರು.

ಸಂಘದ ಮೇಲಿದೆ ಜವಾಬ್ದಾರಿ
ಮಾಹಿತಿ ಕೊರತೆಯಿಂದಾಗಿ ಕಾರ್ಮಿಕರಿಗೆ ಇಲಾಖೆಯ ಯೋಜನೆಗಳು ತಿಳಿಯುತ್ತಿಲ್ಲ. ಮುಂದಿನ ದಿನಗಳಲ್ಲಿ ಸಂಘಟನೆಯ ಸದಸ್ಯರು ಕಾರ್ಮಿಕರ ಹಿತರಕ್ಷಣೆಗೆ ಮುಂದಾಗಬೇಕು. ಕಾರ್ಮಿಕರ ಭವಿಷ್ಯ ಉಜ್ವಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆಗೊಳ್ಳಬೇಕು. ಇಲಾಖೆಯಲ್ಲಿ ಮಿಸಲಿಟ್ಟಿರುವ ಅನುದಾನ ಪಲಾನುಭವಿಗಳಿಗೆ ತಲುಪಬೇಕು. ಕಲ್ಯಾಣ ನಿಧಿಗಳು ನೊಂದ ಕಾರ್ಮಿಕರಿಗೆ ಆಸರೆಯಾಗುತ್ತವೆ. ಇಲಾಖೆಯ ಯೋಜನೆಯ ಲಾಭಗಳು ಅನ್ಯರ ಪಲಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸಂಘದ ಮೇಲಿದೆ ಎಂದು ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಹೇಳಿದರು.