ಜಿಲ್ಲೆ

ಕಾರ್ಮಿಕರು ಪ್ರತಿಭಟನೆಗೆ ಸಜ್ಜಾಗಿ

Mysuru - Desk - Ravikumar
  • ಮಡಿಕೇರಿ: ಕಾರ್ಮಿಕರು ತಮ್ಮ ಸೌಲಭ್ಯ ಮತ್ತು ಹಕ್ಕುಗಳನ್ನು ಉಳಿಸಿಕೊಳ್ಳಲು ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದು ಎಐಟಿಯುಸಿ ಕಟ್ಟಡ ಕಾರ್ಮಿಕರ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಕರೆ ನೀಡಿದರು.

  • ಇತ್ತೀಚೆಗೆ ಸಿದ್ದಾಪುರದಲ್ಲಿ ನಡೆದ ಕೊಡಗು ಜಿಲ್ಲಾ ಕಾಫಿ ನಾಡು ಕಟ್ಟಡ ಕಾರ್ಮಿಕರ ಸಂಘಟನೆಯ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

  • ಕಾರ್ಮಿಕರ ಬೆವರಿನ ಕಣದಲ್ಲಿ ಕಲ್ಯಾಣ ಮಂಡಳಿ ಸ್ಥಾಪನೆಯಾಗಿದ್ದು, ಸಾವಿರಾರು ಕೋಟಿ ರೂ. ಕಾರ್ಮಿಕರ ಹಣ ಸಂಗ್ರಹಿಸಲಾಗಿದೆ. ಇದನ್ನು ನಿಯಮಾನುಸಾರ 18 ಬಗೆಯ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಬಳಸಬೇಕು. ಆದರೆ, ಇಂದಿನ ಸರ್ಕಾರ ಕಿಟ್ ವಿತರಣೆ, ಉಚಿತ ಬಸ್ ಪಾಸ್, ಆರೋಗ್ಯ ತಪಾಸಣೆ ಹೆಸರಿನಲ್ಲಿ ಕೋಟ್ಯಂತರ ರೂ. ಹಣವನ್ನು ಲೂಟಿ ಮಾಡಿದೆ ಎಂದು ಆರೋಪಿಸಿದರು.

  • ಪ್ರಸ್ತುತ ರಾಜ್ಯ ಸರ್ಕಾರ ಸಂಚಾರಿ ಆರೋಗ್ಯ ತಪಾಸಣೆ ಹೆಸರಿನಲ್ಲಿ ಕಾರ್ಮಿಕರ ಹಣವನ್ನು ಪೋಲು ಮಾಡುತ್ತಿದೆ. ಶಿಶುವಿಹಾರ, ನರ್ಸರಿ ಮಕ್ಕಳ ಶೈಕ್ಷಣಿಕ ಧನಸಾಯವನ್ನು ಕೂಡ ರದ್ದು ಮಾಡಿದೆ. ಒಂದರಿಂದ ಪದವಿ ಶಿಕ್ಷಣದವರೆಗೆ ಈ ಹಿಂದೆ ನೀಡುತ್ತಿದ್ದ ಧನ ಸಹಾಯವನ್ನು ಶೇಕಡ 80ರಷ್ಟು ಕಡಿತಗೊಳಿಸಿದೆ. ಹಾಗಾಗಿ, ಕಾರ್ಮಿಕರ ಸೌಲಭ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಫೆ.1ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದರಲ್ಲಿ ಎಲ್ಲ ಕಾರ್ಮಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

  • ಕಾಫಿನಾಡು ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಸುನಿಲ್ ಮಾತನಾಡಿ, ಜಿಲ್ಲೆಯಲ್ಲಿ ಅನಧಿಕೃತ ಸಂಘಟನೆಗಳು ಹಾಗೂ ಸೇವಾ ಕೇಂದ್ರಗಳ ಮೂಲಕ ನಕಲಿ ಕಾರ್ಮಿಕರಿಗೆ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಇದರಿಂದ ನೈಜ ಕಟ್ಟಡ ಕಾರ್ಮಿಕರಿಗೆ ಸಲ್ಲಬೇಕಾದಂತ ಸೌಲಭ್ಯಗಳು ಸಿಗದೇ ವಂಚಿತರಾಗಿದ್ದಾರೆ. ಇಂತಹ ವಂಚಿಸುವ ಸಂಘಟನೆ ಹಾಗೂ ಸೇವಾ ಕೇಂದ್ರಗಳನ್ನು ಗುರುತಿಸಿ ಅವರ ಮೇಲೆ ಸರ್ಕಾರವು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
  • ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಕೃಷ್ಣ, ಕಾರ್ಯದರ್ಶಿ ಸೋಮರಾಜ್ ಅರಸು, ಮೈಸೂರು ಜಿಲ್ಲಾ ಕಾರ್ಯದರ್ಶಿ ದೇವದಾಸ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಳನಿ ಸ್ವಾಮಿ, ಸದಸ್ಯೆ ಪ್ರೇಮಾ, ಭಾರತೀಯ ಮಹಿಳಾ ಫೆಡರೇಶನ್‌ನ ಜಿಲ್ಲಾಧ್ಯಕ್ಷ ಪುಷ್ಪಾ, ಎಐಟಿಯುಸಿ ಸದಸ್ಯ ಮಣಿ, ಸೋಮವಾರ ಪೇಟೆ ತಾಲೂಕು ಕಾರ್ಯದರ್ಶಿ ವಸಂತ್ ಕುಮಾರ್ ಸೇರಿದಂತೆ ಇತರರು ಇದ್ದರು.